ಭಗವದ್ಗೀತೆ	
ಮಹರ್ಷಿ ವ್ಯಾಸರಿಂದ ಪ್ರಣೀತವಾದ. ಮಹಾಭಾರತದ ಭೀಷ್ಮಪರ್ವದಲ್ಲಿ ಸೇರಿಕೊಂಡಿರುವ ಶ್ರೀಕೃಷ್ಣಾರ್ಜುನರ ಸಂವಾದ. ಇದು ಮಹಾಭಾರತದಲ್ಲಿ ಬರುವ ಪರಮ ಶ್ರೇಷ್ಠ ಭಾಗವಾಗಿದ್ದು ಆಸ್ತಿಕರ ಪೂಜ್ಯಗ್ರಂಥ ಎನಿಸಿದೆ.

ಭೀಷ್ಮಪರ್ವದ ಇಪ್ಪತ್ತೈದನೆಯ ಅಧ್ಯಾಯದಿಂದ ನಲವತ್ತೆರಡನೆಯ ಅಧ್ಯಾಯದವರಿಗೆ ಹದಿನೆಂಟು ಅಧ್ಯಾಯಗಳಲ್ಲಿ ಇದು ಹರಡಿದೆ. ಕುರುಕ್ಷೇತ್ರದಲ್ಲಿ ಕೌರವರೂ ಪಾಂಡವರೂ ಯುದ್ದಕ್ಕೆ ಸನ್ನದ್ಧರಾಗಿದ್ದಾಗ ಶ್ರೀಕೃಷ್ಣಾರ್ಜುನನರಲ್ಲಿ ನಡೆದ ಸಂವಾದವೇ ಇದರ ವಿಷಯ. ಶ್ರೀಕೃಷ್ಣನ ಉಪದೇಶವನ್ನೇ ಕೃಷ್ಣದ್ವೈಪಾಯನ ವ್ಯಾಸರು ಏಳುನೂರು ಶ್ಲೋಕಗಳಲ್ಲಿ ರಚಿಸಿ ಮಹಾಭಾರತದಲ್ಲಿ ಸೇರಿಸಿದ್ದಾರೆ.
ಗೀತೆ ಎಂದು ಪ್ರಸಿದ್ಧವಾದ ಭಗವಂತನ ಗೀತೆ ಧೃತರಾಷ್ಟ್ರ್ರನ ಪ್ರಶ್ನೆಯಿಂದ ಪ್ರಾರಂಭವಾಗುತ್ತದೆ. ಕುರುಕ್ಷೇತ್ರದಲ್ಲಿ ಸೇರಿದ ಕೌರವ ಪಾಂಡವರು ಏನನ್ನು ಮಾಡಿದರೆಂದು ಇವನು ಸಂಜಯನನ್ನು ಪ್ರಶ್ನಿಸುತ್ತಾನೆ. ಕುರುಡನಾದ ಧೃತರಾಷ್ಟ್ರನಿಗೆ ಯುದ್ಧ ನೋಡಬೇಕೆಂಬ ಬಯಕೆ ಇದ್ದಲ್ಲಿ ಕಣ್ಣುಗಳನ್ನು ಅನುಗ್ರಹಿಸುವುದಾಗಿ ವ್ಯಾಸರು ಹೇಳಿರುವುದು ಭೀಷ್ಮಪರ್ವದ ಎರಡನೆಯ ಅಧ್ಯಾಯದಲ್ಲಿಯೇ ಕಂಡುಬರುತ್ತದೆ. ಜ್ಞಾತಿವಧೆ ನೋಡಲು ತನಗೆ ರುಚಿಸದಿದ್ದರೂ ಯುದ್ಧದ ಮುನ್ನಡೆ ಕೇಳಲು ಬಯಕೆಯಿದೆ ಎಂದು ಧೃತರಾಷ್ಟ್ರ ಹೇಳುತ್ತಾನೆ. ಆಗ ವ್ಯಾಸರೂ ಸಂಜಯನಿಗೆ ದಿವ್ಯದೃಷ್ಟಿ ಅನುಗ್ರಹಿಸಿ ಅವನು ಯುದ್ಧದ ಘಟನೆಗಳೆಲ್ಲವನ್ನೂ ತಿಳಿಸುತ್ತಾನೆಂದು ಹೇಳುತ್ತಾರೆ.

ಶ್ರೀಕೃಷ್ಣ: ವೃಷ್ಟಿವಂಶದಲ್ಲಿ ಹುಟ್ಟಿದ ಶ್ರೀಕೃಷ್ಣನ ಅಥವಾ ಕೃಷ್ಣಪಂಥರ ಹುಟ್ಟುಬೆಳವಣಿಗೆಳ ವಿಷಯ ಇಲ್ಲಿ ಅಪ್ರಕೃತ. ಈತ ಬುದ್ಧನ ಪೂರ್ವಿಕನೆಂಬುರಲ್ಲಿ ಸಂದೇಹವೇ ಇಲ್ಲ. ಮಹಾಭಾರತದಲ್ಲಿ ಕೃಷ್ಣನ ಪಾತ್ರ ಬಲುಮುಖ್ಯವಾಗಿದೆ. ಒಂದು ಕಡೆ ಇವನು ಗೋಪವೇಶದಿಂದ ಅದ್ಭುತ ಪವಾಡವೆಸಗಿದ ಶಿಶು; ಇನ್ನೊಂದಡೆ ಕಡೆ ಪಾಂಡವರ ಪ್ರಿಯ ಬಾಂಧವ, ಗುರು, ಸಾರಥಿ ಮತ್ತು ದೇವತೆ; ಮಗದೊಂದು ಕಡೆ ದುಷ್ಟಶಿಕ್ಷೆ, ಶಿಷ್ಟಪರಿಪಾಲನೆಗಳಲ್ಲಿ ಸದಾ ನಿರತನಾದ ವಿಷ್ಣುವಿನ ಪ್ರರ್ಣಾವತಾರ, ಭಾಗವತಧರ್ಮ ಸ್ಥಾಪಿಸಿದ ಭಗವಂತ.

ಆರ್ಯರ ಅತ್ಯಂತ ಪ್ರಾಚೀನ ಸಾಹಿತ್ಯದಲ್ಲಿ ಕೃಷ್ಣನ ಹೆಸರು ಅಸಾಧಾರಣವಾಗಿಲ್ಲ 1 ಋಗ್ವೇದದಲ್ಲಿ ಕೃಷ್ಣ ಒಬ್ಬ ಮಂತ್ರ-ದ್ರಷ್ಟøವಾಗಿದ್ದಾನೆ. ಅನುಕ್ರಮಣೀಕಾರ ಇವನನ್ನು ಕೃಷ್ಣ-ಆಂಗಿರಸನೆಂದು ಕರೆದಿದ್ದಾನೆ. ಕೌಷೀತಕಿ ಬ್ರಾಹ್ಮಣದಲ್ಲಿ ಕೃಷ್ಣ-ಅಂಗಿರಸನ ಹೆಸರು ಉಲ್ಲೇಖಿತವಾಗಿದೆ. 2 ಛಾಂದೋಗ್ಯೋಪನಿಷತ್ತಿನ ಒಂದು ಪ್ರಸಿದ್ದವಾಕ್ಯದಲ್ಲಿ ದೇವಕೀ ಪುತ್ರ ಕೃಷ್ಣ ಘೋರ ಆಂಗಿರಸನಿಂದ ಉಪದೇಶಪಡೆಯುತ್ತಾನೆ. 3 ಪಾಣಿನಿ (ಕ್ರಿಪೂ. ಸು. 350) ವಾಸುದೇವಾರ್ಜುನರು ಪೂಜನೀಯರೆಂದು ಹೇಳಿದ್ದಾನೆ. 4 ಚಂದ್ರಗುಪ್ತ ಮೌರ್ಯನಿಗೆ ರಾಯಭಾರಿಯಾಗಿ ಬಂದಿದ್ದ ಮೆಗಾಸ್ತನೀಸ್ (ಕ್ರಿ,ಪೂ.ಸು. 320) ಶೂರಸೇನ ದೇಶದ ಜನರು ಕೃಷ್ಣನನ್ನು ಪೂಜಿಸುತ್ತಿದ್ದರೆಂದು ಹೇಳುತ್ತಾನೆ. 5 ಘುಸುಂಡಿ ಶಿಲಾಶಾಸನದಲ್ಲಿ (ಕ್ರಿ.ಪೂ 200) ಸಂಕರ್ಷಣ ವಾಸುದೇವರ ಹೆಸರುಗಳೂ ತಕ್ಷಶಿಲೆಯ ಯವನ-ಭಾಗವತನಾದ ಹೀಲೀಯೋ ಡೋರಸ್‍ನ ಶಿಲಾಶಾಸನದಲ್ಲಿ (ಕ್ರಿ,ಪೂ. 180) ದೇವದೇವನಾದ ವಾಸುದೇವನ ಹೆಸರೇ ಬಂದಿವೆ. 6 ಮಹಾಭಾರತದ ಅತ್ಯಂತದ ಪ್ರಾಚೀನ ಭಾಗಗಳು (ಕ್ರಿ.ಪೂ. ಸು. 200) ಕೃಷ್ಣನನ್ನು ಚಾರಿತ್ರಕ ವ್ಯಕ್ತಿಯೆಂದೂ ಅವತಾರವೆಂದೂ ಎಣಿಸಿವೆ. 7 ವಾಸುದೇವನೆಂಬ ಹೆಸರು ಭಗವಂತನದೆಂದೂ, ಕ್ಷತ್ರಿಯನದಲ್ಲವೆಂದೂ ಪತಂಜಲಿ (ಕ್ರಿ.ಪೂ.ಸು. 150) ತನ್ನ ಭಾಷ್ಯದಲ್ಲಿ ಹೇಳಿರುತ್ತಾನೆ. ಅಂಗಿರಸ ಕೃಷ್ಣ, ದೇವಕೀಪುತ್ರ ಕೃಷ್ಣ, ಪಾಂಡವರ ಕೃಷ್ಣ-ಇವರೆಲ್ಲ ಬೇರೆ ಬೇರೆ ಕೃಷ್ಣರೂ ಒಬ್ಬನೇ ಕೃಷ್ಣನೊ ಎಂದೂ ಖಚಿತವಾಗಿ ನಿರ್ಧರಿಸಲು ಈ ತನಕ ಮಾಡಿದ ಪ್ರಯತ್ನಗಳೆಲ್ಲ ನಿಷ್ಪಲವಾಗಿವೆ. ಆದರೆ ಛಾಂದ್ಯೋಗದ ಕೃಷ್ಣನಿಗೂ ಮಹಾಭಾರತದ ಕೃಷ್ಣನಿಗೂ ಇರುವ ಸಾದೃಶ್ಯವನ್ನು ಬಾರ್ತ್, ಹಾಪ್‍ಕಿನ್ಸ್ ಮೊದಲಾದ ಪಾಶ್ಚಾತ್ಯ ಪಂಡಿತರೂ ಒಪ್ಪಿಕೊಂಡಿದ್ದಾರೆ.
ಶ್ರೀಕೃಷ್ಣ ಘೋರ-ಅಂಗೀರಸನಿಂದ ಕಲಿತ ಯಜ್ಞದರ್ಶನದಲ್ಲಿ ಈ ಎರಡು ಅಂಶಗಳು ಅತ್ಯಂತ ಮುಖ್ಯವಾಗಿವೆ: 1 ತಪಸ್ಸು ದಾನ, ಋಜುತ್ವ, ಅಹಿಂಸೆ, ಸತ್ಯವಚನ-ಇವೆಲ್ಲ ಯಜ್ಞದ ದಕ್ಷಿಣೆಗಳು, 2 ಯಜ್ಞವಿದ ಅಂತ್ಯಕಾಲದಲ್ಲಿ ಈ ಮಂತ್ರಗಳನ್ನು ಧ್ಯಾನಿಸಬೇಕು-ನೀನು ಅಕ್ಷಯವಾಗಿದ್ದೀಯೆ, ನೀನು ಅಚ್ಯುತವಾಗಿದ್ದೇಯೆ, ನೀನು ಅಚ್ಯುತ ವಾಗಿದ್ಧೀಯೆ ನೀನು ಪ್ರಾಣ ಸ್ವರೂಪವಾಗಿದ್ದೇಯೆ. ಗೀತೆಯಲ್ಲಿ ಯಜ್ಞ ಹೇಗೆ ವ್ಯಾಪಕ ಅರ್ಥ ಪಡೆದಿರುವುದೆಂಬುದನ್ನು ಮರಣಕಾಲದಲ್ಲಿ ಭಗವಂತನನ್ನು ಸ್ಮರಣೆ ಮಾಡುವಾತ ಪರವಗತಿಯಾದ ಅಕ್ಷರ ಪಡೆಯುವನೆಂಬುದನ್ನೂ ಗೀತೆಯಲ್ಲಿ ನೋಡಬಹುದು. ಅರ್ಜುನ ಕೃಷ್ಣನನ್ನು ಅಚ್ಯುತ ಎಂದು ಮೂರು ಸಲ ಸಂಭೋಧಿಸುತ್ತಾನೆ. ಶ್ರೀಕೃಷ್ಣ ಘೋರ ಅಂಗೀರಸನಿಂದ ಏನನ್ನು ಕಲಿತು ಕೊಂಡನೋ ಅದನ್ನೇ ಗೀತೆಯಲ್ಲಿ ವಿವರಿಸಿದ್ದಾನೆ.

ಭಗವದ್ಗೀತೆಯ ಕಾಲ: ಮಹಾಭಾರತದ ಕಾಲದ ಬಗ್ಗೆ ಆಗಲಿ ಅದರ ಕರ್ತೃವಿನ ಬಗ್ಗೆ ಆಗಲಿ ಪಂಡಿತರಲ್ಲಿ ಒಮ್ಮತವಿಲ್ಲ. ವಿಂಟರನಿಟ್ಸ್ ಮಹಾಭಾರತ ಕ್ರಿ.ಪೂ. 400ರಿಂದ ಕ್ರಿ.ಶ. 400ರ ತÀನಕ ಬೆಳೆದು ನಿಂತಿರಬಹುದೆಂದು ಹೇಳಿರುತ್ತಾನೆ. ಈ ನಿರ್ಣಯವನ್ನು ಹೆಚ್ಚು ಕಡಿಮೆ ಅನೇಕ ಪಂಡಿತರು ಒಪ್ಪಿಕೊಂಡಿರುತ್ತರೆ. ಆದರೆ ಇದಕ್ಕೆ ಮೂಲವಾದ ಭಾರತ ಕ್ರಿ.ಪೂ. 400ಕ್ಕಿಂತ ಹಿಂದಾಗಿರಬೇಕು. ಗೀತೆಯಲ್ಲಿ ನಾರಯಣನ ಹೆಸರಾಗಲಿ ಘುಸಂಡಿ ಶಿಲಾ ಶಾಸನದಲ್ಲಿ ಸಂಕರ್ಷಣನ ಹೆಸರಾಗಲಿ ಬರದೆ ಇರುವುದನ್ನು ಇಲ್ಲಿ ಗಮನಿಸಬಹುದು. ಮೌನದಿಂದ ಪ್ರಮೇಯ ಸಾಧಿಸುವುದು ಅಷ್ಟು ಅಸಂದಿಗ್ಧವಾಗದಿದ್ದರೂ ಗೀತೆ ಕ್ರಿ.ಪೂ. 400ಕ್ಕಿಂತ ಈಚೆಗೆ ರಚಿತವಾಗಿದ್ದರೆ ಭಾಗವತ ಧರ್ಮದ ತಳಹದಿಯಾದ ನಾರಾಯಣನಾಮವಾಗಲೀ ವ್ಯೂಹಾದಿ ತತ್ತ್ವಗಳಾಗಲೀ ಗೀತೆಯಲ್ಲಿ ಕಂಡು ಬಂದಿರುವುದು ಆಶ್ಚರ್ಯ, ಆದ್ದರಿಂದ ಗೀತೆ ಕ್ರಿ,ಪೂ. 400ಕ್ಕಿಂತ ಈಚೆಗೆ ಇಂದಿನ ರೂಪ ತಾಳಿರಲಾರದು ಎಂದು ಅಭಿಪ್ರಾಯಪಡಬಹುದು.

ಭಗವದ್ಗೀತೆ: ಮಹಾಭಾರತದಲ್ಲಿ ಇಂದಿನ ರೂಪ ತಾಳಿರುವ ಗೀತೆ ಒಬ್ಬನಿಂದ ರಚಿತವಾದ ಮೂಲಕೃತಿಯಲ್ಲವೆಂದೂ ಮತ್ತೆ ಬರೆದು ವಿಸ್ತರಿಸಿದ ಪ್ರಾಚೀನ ಕೃತಿಯೆಂದೂ ಅನೇಕ ಪಂಡಿತರ ಆಭಿಪ್ರಾಯ. ಆದರೆ ಮೂಲಕೃತಿಯ ರೂಪ ರೇಖೆಗಳ ಬಗ್ಗೆ ಸರ್ವಸಮ್ಮತ ಅಭಿಪ್ರಾಯವಿಲ್ಲ. ಗೀತೆ ಯಾವುದೊ ಒಂದು ಮೂಲವೇದಂತಕೃತಿಯ ನವ ವಿನ್ಯಾಸವೆಂಬುದು ಹಾಲ್‍ಟ್ಸಾಮ್ಯಾನಿನ ಮತ. ಗೀತೆ ಮೊದಲು ಸಾಂಖ್ಯಯೋಗದ ದರ್ಶನವಾಗಿತ್ತೆಂದೂ ಆಮೇಲೆ ಎಂದರೆ ಕ್ರಿ.ಪೂ 300ಕ್ಕಿಂತ ಈಚೆಗೆ ಕೃಷ್ಣವಾಸುದೇವರ ಪಂಥದೊಂದಿಗೆ ಬೆರೆತು ಹೋಯಿತೆಂದೂ ಗಾರ್ಬ್‍ನ ಅಭಿಪ್ರಾಯ. ಹಾಪ್‍ಕಿನ್ಸ್ ಈ ಮತ ಖಂಡಿಸಿ ಇದು ಯಾವುದೋ ಒಂದು ಬಹಳ ಹಳೆಯದಾದ ವಿಷ್ಣುಗೀತೆಯ ಕೃಷ್ಣರೂಪಾಂತರವೆಂದು ಹೇಳುತ್ತಾನೆ. ಇದು ವಾಸುದೇವ ಪಂಥದ ಕೃತಿಯೆಂದು ಬಾರ್ನೆಟ್ ಅಭಿಪ್ರಾಯ ಫರ್ಕ್‍ಹಾರ್, ಕೀತ್-ಇವರು ಇದು ಕೃಷ್ಣಪಂಥಕ್ಕೆ ಹೊಂದಿಸಲ್ಪಟ್ಟ ಯಾವುದೋ ಒಂದು ಉಪನಿಷತ್ತಿರಬೇಕೆಂದು ಆಭಿಪ್ರಾಯಪಡುತ್ತಾರೆ. ವೇದಾಂತಕ್ಕೂ ಭಾಗವತಧರ್ಮಕ್ಕೂ ಸಮನ್ವಯವಾಗಿದೆಯೆಂದು ಒಂದು ವೇಳೆ ಒಪ್ಪಿಕೊಂಡರೆ ಆದ ಬಾಹ್ಯಕಾರಣವಿಲ್ಲದೆ ತನ್ನಷ್ಟಕ್ಕೆ ತಾನೇ ಆಗಿದೇ ಏಕೆಂದರೆ ಉದ್ದೇಶಪೂರ್ವಕವಾಗಿ ಇಂಥ ಸಮನ್ವಯ ಆಗಿದ್ದರೆ ಗೀತಾಕರ್ತೃವಿಗÉ ತರ್ಕಬದ್ದವೂ, ವಿರೋಧ ರಹಿತವೂ ಆದ ಒಂದು ತಂತ್ರ ರಚಿಸಲು ಆಸಾಧ್ಯವಾಗುತ್ತಿರಲಿಲ್ಲ. ಈ ಅಭಿಪ್ರಾಯಗಳನ್ನೆಲ್ಲ ಪರಿಶೀಲಿಸಿ ನೋಡಿದರೆ ಶ್ವೇತಾಶ್ವತರ, ಕಾಠಕ ಮೊದಲಾದ ಉಪನಿಷತ್ತುಗಳಿಗೂ ಗೀತೆಗೂ ಇರುವ ಸಾದೃಶ್ಯಗಳನ್ನು ಮರೆಯಲಾಗುವುದಿಲ್ಲ.
ಹಾಗಾದರೆ ಗೀತೆ ಯಾವ ಉದ್ದೇಶದಿಂದ ರಚಿಸಲ್ಪಟ್ಟಿದೆ? ಸಾಂಖ್ಯಯೋಗ ವ್ಭೆದಾಂತ ಕೃಷ್ಣಭಕ್ತಿ-ಇವೆಲ್ಲವೂ ತಮ್ಮ ಮೂಲರೂಪಗಳನ್ನು ಬಿಟ್ಟು ಒಂದು ನವ ವಿನ್ಯಾಸ ನವ ವಿಧಾನ ಪಡೆದಿವಿಯೆಂದು ಹೇಳಬಹದು. ಗೀತಾಕರ್ತೃರೂಢಿಸಮ್ಮತವಾದ ಅಭಿಪ್ರಾಯವನ್ನಾಗಲೀಉದಾರವಾದ ಆಭಿಪ್ರಾಯವನ್ನಾಗಲೀ ಬಿಡುವಂತೆ ಕಂಡುಬರುವುದಿಲ್ಲ : ವೇದೋಪನಿಷತ್ತುಗಳು ಸಾಂಖ್ಯಯೋಗಗಳು ಆತ್ಮ ವಾಸುದೇವನಿಷ್ಟೆ ಇವುಗಳಲ್ಲಿ ಯಾವುದನ್ನೂ ತ್ಯಜಿಸಿಲ್ಲ : ಕರ್ಮ ಜ್ಞಾನಭಕ್ತಿ ಇವುಗಳೆಲ್ಲ ಮುಕ್ತಿಯ ದ್ವಾರಗಳೇ; ಎಲ್ಲಕ್ಕಿಂತಲೂ ಹೆಚ್ಚಾಗಿ ಭಗವದನುಗ್ರಹ ಭಕ್ತರ ಹೃದಯದಲ್ಲಿ ಪ್ರಕಾಶಿಸುತ್ತದೆ; ವರ್ಣಾಶ್ರಮಧರ್ಮಗಳನ್ನು ನಿರಾಕರಿಸದಿದ್ದರೂ ಅವುಗಳಿಂದ ಉಂಟಾಗಬಹುದಾದ ಸಂಕೋಚ ಮನೋಭಾವ ಕಂಡುಬರುವುದಿಲ್ಲ. ಇಂಥ ಭಿನ್ನ ಭಿನ್ನ ಭಾವನೆಗಳ ಸಮನ್ವಯ ಹಿಂದೆ ಎಂದಿಗೂ ಆಗಿರಲಿಲ್ಲ. ನದಿಗಳು ಸಮುದ್ರ ಸೇರುವಾಗ ನಾಮರೂಪ ಕಳೆದುಕೊಂಡು ಜಲರಾಶಿಯಾಗುವಂತೆ ಭಿನ್ನತತ್ತ್ವಗಳು ತಮ್ಮ ವೈಶಿಷ್ಟ ಕಳೆದುಕೊಂಡು ಗೀತಾ ಕರ್ತೃವಿನ ಕೈಯಲ್ಲಿ ಅಸಾಧಾರಣ ರೂಪ ಪಡೆದಿವೆ. ನದಿಯಲ್ಲಿ ಪ್ರವಾಹ ಬಂದಾಗ ಅದು ದಡ ಮೀರಿ ಬಾವಿ ಕೆರೆಗಳನ್ನು ಒಂದು ಮಾಡುವಂತೆ ಕೃಷ್ಣ ಪ್ರವಾಹ ಎಲ್ಲ ತತ್ತ್ವಗಳನ್ನೂ ಏಕರಸವನ್ನಾಗಿ ಮಾಡಿತು. ಕೃಷ್ಣನೇ ವೇದಾಂತ ಕೃತ್, ಧರ್ಮಭೃತ್, ಕ್ಷರಾಕ್ಷರಗಳಿಗೆ ಒಡೆಯ, ಪ್ರಕೃತಿಯನ್ನು ನಿಯಂತ್ರಿಸಿರುವ ಪುರುಷೋತ್ತಮ; ಅವನನ್ನು ಅರಿತುಕೊಂಡರೆ ಸಂಸಾರಕ್ಕೆ ಹಿಂತಿರುಗಬೇಕಾಗಿಲ್ಲ.

ಗೀತೆಯ ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಬರುವ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ... ಅಧ್ಯಾಯಃ ಎಂಬ ಸಮಾಪ್ತಿ ವಾಕ್ಯ ಈ ಕೃತಿಯ ಸ್ವರೂಪ ಅರಿತುಕೊಳ್ಳಲು ಸಹಕಾರಿಯಾಗಿರುತ್ತದೆ. ಭಗವದ್ಗೀತಾಸು ಎಂಬುದು ಬಹುವಚನದಲ್ಲಿದೆ. ಗೀತೆಗಳೆಂಬ ಏಳುನೂರು ಶ್ಲೋಕಗಳಿಂದ ಭಗವದ್ಗೀತೆಯಾಗಿದೆ. ಆದ್ದರಿಂದ ತರ್ಕಬದ್ದವಾದ ಒಂದು ದರ್ಶನ ಕಂಡುಹಿಡಿಯಲು ಪ್ರಯತ್ನಿಸಿದರೆ ಅದು ಫಲಕಾರಿಯಾಗದಿರುವುದು ಸ್ವಾಭಾವಿಕವೇ. ಒಂದೇ ಪದ ಬಹ್ವರ್ಥದಲ್ಲಿ ಪ್ರಯೋಗವಾಗಿರುವುದನ್ನೂ ಪುನರುಕ್ತಿಯನ್ನೂ ಗೀತೆಯಲ್ಲಿ ನೋಡಬಹುದು. ಅಧ್ಯಾಯಗಳಿಗೆ ಬೇರೆ ಬೇರೆ ಹೆಸರುಕೊಟ್ಟಿದ್ದರೂ ಕರ್ಮಜ್ಞಾನಭಕ್ತಿಗಳನ್ನು ಎಲ್ಲೆಲ್ಲಿಯೂ ನೋಡಬಹುದು. ಕೆಲವು ಸ್ಥಳಗಳಲ್ಲಿ ಶ್ಲೋಕದಿಂದ ಶ್ಲೋಕಕ್ಕೆ, ಅಧ್ಯಾಯದಿಂದ ಅಧ್ಯಾಯಕ್ಕೆ ನಿಕಟ ಸಂಬಂಧ ಕಂಡು ಹಿಡಿಯುವುದು ಕಷ್ಟವೇ ಆಗಿದೆ. ವ್ಯಕ್ತಿಯನ್ನು ಸಂಸಾರದಿಂದ ಬಿಡುಗಡೆಗೊಳಿಸುವ ಒಂದು ದಿವ್ಯದರ್ಶನ ಗೀತೆ ಎಂದೂ ಇದು ಕೇವಲ ದರ್ಶನ ಪದ್ದತಿಯಲ್ಲವೆಂದೂ ಇದರಿಂದ ತಿಳಿಯಬಹುದು.

ಉಪನಿಷತ್ತು ಎಂಬುದು ಎರಡನೆಯ ಪದ. ಯಾವುದೋ ಒಂದು ಪ್ರಾಚೀನವಾದ ಉಪನಿಷತ್ತೇ ಗೀತೆಯಾಗಿ ಪರಿಣಮಿಸಿದೆಯೆಂದು ಕೆಲವು ಪಂಡಿತರ ಅಭಿಪ್ರಾಯ. ಪ್ರಸಿದ್ಧವಾದ ಒಂದು ಶ್ಲೋಕ ಉಪನಿಷತ್ತುಗಳನ್ನು ಹಸುಗಳಿಗೂ ಗೀತೆಯನ್ನು ಹಾಲಿಗೂ ಕೃಷ್ಣನನ್ನು ಗೊಲ್ಲನಿಗೂ ಅರ್ಜುನನ್ನು ಕರುವಿಗೂ ಹೋಲಿಸಿದೆ. ಇದರಿಂದ ಗೀತೆ ಉಪನಿಷತ್ತುಗಳ ಸಾರವೆಂದು ತಿಳಿದುಬರುತ್ತದೆ. ಈಶಾವಾಸ್ಯೋಪನಿಷತ್ತಿನ ಮೊದಲಿನ ಎರಡು ಮಂತ್ರಗಳಲ್ಲಿ ಸೂಚಿಸಲ್ಪಟ್ಟಿರುವ ಸಂಗಪರಿತ್ಯಾಗ ಮತ್ತು ಕರ್ಮಾನುಷ್ಠಾನ ಕಠೋಪನಿಷತ್ತಿನಲ್ಲಿ ವಿವರಿಸಿರುವ ಆತ್ಮನ ಅವಿನಾಶಿಸ್ವರೂಪ, ಶ್ವೇತಾಶ್ವತರೋಪನಿಷತ್ತಿನಲ್ಲಿ ಪ್ರತಿಪಾದಿಸಿರುವ ಭಕ್ತಿ ಇವು ಗೀತೆಯಲ್ಲಿ ಹೇಗೆ ವಿಸ್ತಾರವಾಗಿ ಬೆಳೆದಿವೆಯೆಂಬುದನ್ನು ಇಲ್ಲಿ ನೆನಪಿಗೆ ತರಬಹುದು.

ಬ್ರಹ್ಮವಿದ್ಯಾಯಾಮ್ ಎಂಬುದು ಮೂರನೆಯ ಪದ. ಇದು ಗೀತಾಸ್ವರೂಪದ ವಿಷಯದಲ್ಲಿ ಇರುವ ಸಂಶಯಗಳೆಲ್ಲವನ್ನೂ ಹೋಗಲಾಡಿಸಬೇಕು. ಗೀತೆ ನೀತಿ ಶಾಸ್ತ್ರದ ಅಥವಾ ಧರ್ಮಶಾಸ್ತ್ರದ ಕೈಪಿಡಿಯಲ್ಲ; ಬ್ರಹ್ಮಸಾಕ್ಷತ್ಕಾರವೇ ಅದರ ಗುರಿ. ನನ್ನನ್ನು ನಿಃಸಂಶಯವಾಗಿಯೂ ಸಂಪೂರ್ಣವಾಗಿಯೂ ಹೇಗೆ ತಿಳಿದು ಕೊಳ್ಳಬಹುದೋ ಅದನ್ನು ಕೇಳು ಎಂದು ಕೃಷ್ಣನೇ ಹೇಳುತ್ತಾನೆ. ಗೀತೆ ಸ್ಥಿತಪ್ರಜ್ಞನ, ಯೋಗಿಯ, ಭಕ್ತನ ಚರ್ಯೆಯನ್ನು ಹೇಳುತ್ತದೆಯೇ ಹೊರತು ಸಮಾಜಕಲ್ಯಾಣವನ್ನಾಗಲೀ ನೀತಿಯನ್ನಾಗಲೀ ನಿರೂಪಿಸುವುದಿಲ್ಲ.

ಯೋಗಶಾಸ್ತ್ರೇ, ಎಂಬುದು ನಾಲ್ಕನೆಯ ಪದ. ಯೋಗಶಬ್ದ ಗೀತೆಯ ಆಧಾರಪದ, ಗೀತೆಯೆ ಆಧಾರದಪದ, ಗೀತೇಯೇ ಯೋಗಶಾಸ್ತ್ರ, ಅದರ ಉಪದೇಶ ಯೋಗ, ಅದು ವಿವರಿಸುವ ಆದರ್ಶವ್ಯಕ್ತಿ ಯೋಗಿ. ಕೃಷ್ಣನೇ ಯೋಗೇಶ್ವರ, ಭಗವಂತನೊಂದೆಗೆ ಯೋಗ ಎಂದರೆ ಸಾಯುಜ್ಯ ಪಡೆಯಲು ಗೀತೆ ಮಾರ್ಗ ತೋರಿಸಿರುವುದರಿಂದ ಯೋಗಶಾಸ್ತ್ರ ಎನಿಸಿದೆ.
ಕೊನೆಯ ಪದವಾದ ಶ್ರೀಕೃಷ್ಣಾರ್ಜುನ ಸಂವಾದೇ ಎಂಬುದು ಗೀತೆಯ ಬಾಹ್ಯರೂಪವನ್ನು ಸೂಚಿಸುತ್ತದೆ. ಸಂವಾದರೂಪದಿಂದ ಬ್ರಹ್ಮಜ್ಞಾನ ಉಪದೇಶಿಸುವುದು ಉಪನಿಷತ್ತುಗಳ ಪ್ರಾಚೀನ ಸಂಪ್ರದಾಯ.

	ಆತ್ಮ-ಬ್ರಹ್ಮ: ಉಪನಿಷತ್ತುಗಳಲ್ಲಿ ಪ್ರತಿಪಾದಿತವಾದ ಬ್ರಹ್ಮವೇ ಗೀತೆಯಲ್ಲಿ ಶ್ರೀಕೃಷ್ಣಸ್ವರೂಪದಿಂದ ವ್ಯಕ್ತವಾಗಿದೆ. ಕೃಷ್ಣನೇ ಸಮಸ್ತ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ. ಅವನೇ ಅನಿರ್ವಾಚ್ಯ ಪರಾಗತಿ. ಅವನಲ್ಲಿಗೆ ಹೋದವರು ಹಿಂತಿರುಗುವುದಿಲ್ಲ. ಅವ್ಯಕ್ತಮೂರ್ತಿ ಕೃಷ್ಣನಿಂದ ಈ ಜಗತ್ತೆಲ್ಲವೂ ವ್ಯಾಪಿಸಲ್ಪಟ್ಟಿದೆ. ಕೃಷ್ಣನನ್ನು ಪರಬ್ರಹ್ಮವೆಂದೂ ಪರಂಧಾಮನೆಂದೂ ಅರ್ಜುನ ಕರೆಯುತ್ತಾನೆ. ಇವನೇ ಅವ್ಯಯವೂ ಅಮೃತವೂ ಆದ ಬ್ರಹ್ಮಕ್ಕೆ ಪ್ರತಿಷ್ಠೆ. ಅಗೋಚರ ಬ್ರಹ್ಮೋಪಾಸನೆಯಿಂದ ಯಾವ ಪದ ಹೊಂದಬಹುದೋ ಅದನ್ನೇ ಪರಮ ಶ್ರದ್ಧೆಯಿಂದ ಕೂಡಿದ ಕೃಷ್ಣೋಪಾಸನೆಯಿಂದ ಹೊಂದಬಹುದು. ಅಂಥ ಉಪಾಸಕ ಯುಕ್ತತಮ. ಅದ್ದರಿಂದ ಔಷನಿಷದ ಬ್ರಹ್ಮಕ್ಕೂ ಕೃಷ್ಣನಿಗೂ ಯಾವ ಭೇದವೂ ಇಲ್ಲ. ಕೃಷ್ಣ ಬ್ರಹ್ಮವಾಗಿರುವುದರಿಂದ ಆತ್ಮನೂ ಆಗಿದ್ದಾನೆ. ಅವನಿಗೆ ಎರಡು ಪ್ರಕೃತಿಗಳಿವೆ: ಚಿದ್ರೂಪವಾದ ಪರಾಪ್ರಕೃತಿ, ಜಡವಾದ ಅಪರಾಪ್ರಕೃತಿ. ಭೂಮಿಯೇ ಮೊದಲಾದ ಪಂಚತನ್ಮಾತ್ರಗಳೂ ಮನಸ್ಸು ಬುದ್ಧಿ ಅಹಂಕಾರಗಳೂ ಅಪರಾಪ್ರಕೃತಿ. ಇದಕ್ಕಿಂತ ಬೇರೆ ಯಾವ ಪರಾಪ್ರಕೃತಿ ಜೀವರೂಪದಲ್ಲಿದೆ. ಇದೇ ಜಗತ್ತನ್ನು ಎತ್ತಿ ಹಿಡಿದಿದೆ. ಕೃಷ್ಣನ ಸನಾತನ ಅಂಶವೇ ಜೀವಲೋಕದಲ್ಲಿ ಜೀವನಾಗಿ ಅಪರಾಪ್ರಕೃತಿಯಾದ ಇಂದ್ರಿಯಗಳನ್ನು ಸೆಳೆದುಕೊಳ್ಳುತ್ತದೆ. ಇವನೇ ಸಮಸ್ತ ಪ್ರಾಣಿಗಳ ಹೃದಯದಲ್ಲಿರುವ ಆತ್ಮ ಆತ್ಮಾನಾತ್ಮಗಳು ಇವನ ಎರಡು ಪ್ರಕೃತಿಗಳಾಗಿದ್ದರೂ ಇವನು ಇವೆರಡನ್ನೂ ಅತಿಕ್ರಮಿಸಿ ಪರಮಾತ್ಮನಾಗಿರುತ್ತಾನೆ.

	ಪುರುಷ: ಶರೀರವೆಂಬ ಪುರದಲ್ಲಿರುವವನಿಗೆ ಪುರುಷನೆಂದು ಹೆಸರು. ಈ ದೃಷ್ಟಿಯಿಂದ ಜೀವಾತ್ಮ ಪುರುಷನೆನಿಸಿದ್ದಾನೆ. ಇಡಿಯ ಜಗತ್ತೆಲ್ಲ ಯಾವನಿಗೆ ಶರೀರವೋ ಅಂಥ ಪರಮಾತ್ಮನೂ ಪುರುಷ. ಪುರುಷ, ಕಲ್ಪನೆ ಋಗ್ವೇದದಷ್ಟೇ ಪ್ರಾಚೀನ ಋಗ್ವೇದದ ಪುರುಷಸೂಕ್ತದಲ್ಲಿ ಬ್ರಹ್ಮಾಂಡವನ್ನೆಲ್ಲ ಸುತ್ತಲೂ ವ್ಯಾಪಿಸಿಕೊಂಡು ಹತ್ತು ಅಂಗುಲದಷ್ಟು ಅತಿಕ್ರಮಿಸಿದ್ದಾನೆಂದು ಹೇಳಿದೆ. ಉಪನಿಷತ್ತುಗಳಲ್ಲಿ ಈ ಕಲ್ಪನೆ ಇನ್ನೂ ವಿಶಾಲವಾಗಿ ಬೆಳೆದುಕೊಂಡಿದೆ. ಮೊದಲು ಈ ಜಗತ್ತೆಲ್ಲ ಪುರುಷಾಕಾರನಾದ ಆತ್ಮನೇ ಆಗಿತ್ತು. ಅಂಗುಷ್ಠ ಪರಿಮಾಣವುಳ್ಳ ಪುರುಷ ಶರೀರದಲ್ಲಿರುತ್ತಾನೆ. ದಿವ್ಯನೂ ಅಮೃತನೂ ಆದ ಪುರುಷ ಒಳಗೂ ಹೊರಗೂ ಇರುತ್ತಾನೆ. ಔಪನಿಷದ ಪುರುಷನೇ ಗೀತೆಯಲ್ಲಿ ಪ್ರತಿಪಾದಿತನಾಗಿದ್ದಾನೆ. ಪುರುಷನೇ ಅಧಿದೈವತ; ಎಂದರೆ ಆದಿತ್ಯನಲ್ಲಿ ಅಂತರ್ಗತನಾಗಿ ಸರ್ವಪ್ರಾಣಿಗಳ ಇಂದ್ರಿಯಗಳಿಗೆ ಅನುಗ್ರಾಹಕನಾಗಿರುತ್ತಾನೆ. ಅಧಿಭೂತ-ಅಧಿದೈವ-ಅಧಿಯಜ್ಞಗಳಿಂದ ಇವನನ್ನು ಅರಿಯುವವರು ಮೋಕ್ಷ ಹೊಂದುತ್ತಾರೆ. ಈ ಪರಮ ಪುರುಷ ಕವಿಯೂ ಪುರಾಣನೂ ನಿಯಾಮಕನೂ ಅಣುವಿಗಿಂತ ಸೂಕ್ಷ್ವನೂ ಸರ್ವಕ್ಕೂ ಧಾತೃವೂ ಅಚಿಂತ್ಯವಾದ ರೂಪಯುತನೂ ಆದಿತ್ಯವರ್ಣನೂ ತಮಸ್ಸಿನ ಆಚೆ ಇರುವವನೂ ಆಗಿರುತ್ತಾನೆ. ಈ ಲೋಕದಲ್ಲಿ ಕ್ಷರ ಮತ್ತು ಅಕ್ಷರ ಎಂಬ ಇಬ್ಬರು ಪುರುಷರು ಪ್ರಸಿದ್ಧರಾಗಿದ್ದಾರೆ. ಸರ್ವಪ್ರಾಣಿಗಳು ಕ್ಷರ; ಎಂದರೆ ಸರ್ವಪ್ರಾಣಿಗಳಲ್ಲಿರುವ ಅನಾತ್ಮವಸ್ತು, ಪ್ರಕೃತಿ ಅಕ್ಷರ ಕೂಟಸ್ಥ ಎಂದರೆ ಅಚಲನಾದ ಆತ್ಮ. ಆದರೆ ಕ್ಷರ-ಅಕ್ಷರ ಪುರುಷರಿಗಿಂತ ಬೇರೆಯವನಾದ ಪುರುಷೋತ್ತಮನಿದ್ದಾನೆ. ಇವನೇ ಪರಮಾತ್ಮ. ಈ ಅವ್ಯಯನಾದ ಈಶ್ವರನೇ ಮೂರು ಲೋಕಗಳನ್ನೂ ಪ್ರವೇಶಿಸಿ ಎತ್ತಿ ಹಿಡಿದಿರುತ್ತಾನೆ. ಇವನು ಕ್ಷರವನ್ನು ಮೀರಿ ಅಕ್ಷರಕ್ಕಿಂತ ಉತ್ತಮನಾಗಿರುತ್ತಾನೆ; ಆದ್ದರಿಂದ ಲೋಕದಲ್ಲಿಯೂ ವೇದದಲ್ಲಿಯೂ ಪುರುಷೋತ್ತಮನೆಂದೂ ಪ್ರಸಿದ್ಧನಾಗಿದ್ದಾನೆ. ಪುರುಷೋತ್ತಮನಿಗೆ ಕ್ಷರಾಕ್ಷರಗಳು ಎರಡು ಪ್ರಕಾರಗಳಾಗಿವೆ ಎಂದರ್ಥ.

	ಈಶ್ವರ: ಆದಿಪುರುಷ ಅಮೃತತ್ವಕ್ಕೆ ಈಶಾನನೆಂದು ಪುರುಷಸೂಕ್ತ ಹೇಳುತ್ತದೆ. ಅಂಗುಷ್ಠಪರಿಮಾಣವುಳ್ಳಪುರುಷ ಭೂತಭವ್ಯಗಳಿಗೆ ಈಶಾನನೆಂದು ಕಠೋಪನಿಷತ್ತಿನಲ್ಲಿ ಹೇಳಿದೆ. ಈಶ ಮಹೇಶ್ವರ ಮೊದಲಾದ ಶಬ್ದಗಳನ್ನು ಶ್ವೇತಾಶ್ವತರೋಪನಿಷತ್ತಿನಲ್ಲಿ ಪ್ರಯೋಗಿಸಿದೆ. ಕೃಷ್ಣ ತಾನು ಮಹೇಶ್ವರನೆಂದು ಗೀತೆಯಲ್ಲಿ ಹೇಳಿಕೊಂಡಿದ್ದಾನೆ. ಅವನು ಸರ್ವಲೋಕಗಳಿಗೆ ಮಹೇಶ್ವರ, ಸರ್ವ ಭೂತಗಳಿಗೆ ಮಹೇಶ್ವರ. ವಿಶ್ವರೂಪದರ್ಶನದಲ್ಲಿ ಅರ್ಜುನ ನೋಡಿದ್ದು ಕೃಷ್ಣನ ಐಶ್ವರ್ಯ ಯೋಗ. ಪರಮೇಶ್ವರನೇ ಸಮಸ್ತ ಪ್ರಾಣಿಗಳಲ್ಲಿ ಸಮವಾಗಿರುತ್ತಾನೆ. ನಶ್ವರ ವಸ್ತುಗಳಲ್ಲಿ ಅವಿನಾಶಿಯಾಗಿರುತ್ತಾನೆ. ಈಶ್ವರ ಸರ್ವಪ್ರಾಣಿಗಳನ್ನೂ ಯಂತ್ರಾರೂಢವಾದ ಬೊಂಬೆಗಳಂತೆ ತಿರುಗಿಸುತ್ತ, ಅವರ ಹೃದಯದಲ್ಲಿ ನೆಲಸಿರುತ್ತಾನೆ. ಮನುಷ್ಯದೇಹದಲ್ಲಿರುವ ಪರಮಪುರುಷ ಮಹೇಶ್ವರ ಎನಿಸಿದ್ದಾನೆ.

	ಅವತಾರ: ಅವತಾರತತ್ತ್ವದ ಮೂಲ ನಮಗೆ ಮೊದಲು ಗೀತೆಯಲ್ಲಿ ಕಂಡುಬರುತ್ತದೆ. ಭಗವಂತ-ಐಶ್ವರ್ಯವೇ ಮೊದಲಾದ ಷಡ್ಗುಣಗಳಿಂದ ಕೂಡಿದ್ದರೂ-ಮನುಷ್ಯನಂತೆ ಹುಟ್ಟಿದಾಗ ಬೆಳೆದಾಗ ಅವತಾರವೆನಿಸುವನೇ ಹೊರತು ಮನುಷ್ಯ ದೇವತ್ವವನ್ನು ಪಡೆದಾಗ ಅವತಾರವೆನಿಸುವುದಿಲ್ಲ. ವಾಸುದೇವ ಕೃಷ್ಣನಾಗಿ ಕಂಡುಬಂದನೇ ಹೊರತು ಕೃಷ್ಣನೆಂಬ ಗೊಲ್ಲರ ಹುಡುಗ ಅವತಾರ ಪದವಿಯನ್ನು ಏರಲಿಲ್ಲ. ಅವತಾರ ವ್ಯಕ್ತವಾದಾಗ ಅವತಾರಿಯ ಗುರುತು ಜನರಿಗೆ ತಿಳಿಯುತ್ತದೆಂದು ಹೇಳಲಾಗುವುದಿಲ್ಲ. ಕೃಷ್ಣನ ಪ್ರಿಯ ಬಾಂಧವನೂ ನೆಂಟನೂ ಆದ ಅರ್ಜುನನಿಗೇ ಕೃಷ್ಣನ ಮಹಿಮೆಯೂ ವಿಶ್ವರೂಪವೂ ಅನೇಕ ವೇಳೆ ತಿಳಿಯುತ್ತಿರಲಿಲ್ಲ. ಅರ್ಜುನ ಎಷ್ಟೋ ಸಲ ಕೃಷ್ಣನನ್ನು ದಿಟ್ಟತನದಿಂದ ಕೃಷ್ಣ; ಯಾದವ; ಸಖ; ಎಂದು ಕರೆದು ವಿಹಾರ-ಶಯ್ಯಾಸನಗಳಲ್ಲಿ ಸರಿಯಾಗಿ ಗೌರವವನ್ನು ತೋರಿಸಲಿಲ್ಲ. ಮೂಢರು ಇವನ ಪರಭಾವವನ್ನು ಅರಿಯದೆ ಮನುಷ್ಯಶರೀರದಲ್ಲಿರುವ ಇವನನ್ನು ತಿರಸ್ಕರಿಸುತ್ತಾರೆ. ಆದರೆ ಯಾರು ಕೃಷ್ಣನ ದಿವ್ಯವಾದ ಅವತಾರವನ್ನೂ ಕರ್ಮವನ್ನೂ ಸರಿಯಾಗಿ ಅರಿತುಕೊಂಡಿರುವರೋ ಅವರು ಪುನ: ಸಂಸಾರಕ್ಕೆ ಬರುವುದಿಲ್ಲ.

	ಕೃಷ್ಣನ ಅವತಾರ ವಿಷಯದಲ್ಲಿ ಅರ್ಜುನನಿಗಿದ್ದ ಸಂಶಯವನ್ನು ಆತ ಸ್ಪಷ್ಟವಾಗಿ ಪರಿಹರಿಸುತ್ತಾನೆ. ತಾನು ಸೂರ್ಯನಿಗೆ ಉಪದೇಶಿಸಿದ ಯೋಗ ಪರಂಪರೆಯಿಂದ ಬಂದಿದ್ದರೂ ದೀರ್ಘಕಾಲವಾದ್ದರಿಂದ ನಷ್ಟವಾಯಿತೆಂದು ಕೃಷ್ಣ ಹೇಳಿದಾಗ ಅರ್ಜುನನಿಗೆ ಸ್ವಲ್ಪ ಭ್ರಾಂತಿ ಉಂಟಾಯಿತು; ಏಕೆಂದರೆ ಕೃಷ್ಣನ ಜನ್ಮ ಇತ್ತೀಚಿನದು, ಸೂರ್ಯನದು ಹಿಂದಿನದು; ಆಗ ಕೃಷ್ಣ ಹೇಳುತ್ತಾನೆ: ನನಗೂ ನಿನಗೂ ಅನೇಕ ಜನ್ಮಗಳು ಕಳೆದುಹೋದುವು. ನಾನು ಅವನ್ನೆಲ್ಲ ತಿಳಿದಿರುತ್ತೇನೆ, ನೀನು ತಿಳಿದಿಲ್ಲ. ನಾನು ಜನ್ನರಹಿತನಾಗಿದ್ದರೂ ಅವ್ಯಯ ಸ್ವರೂಪನಾಗಿದ್ದರೂ ಭೂತಗಳಿಗೆ ನಿಯಾಮಕನಾಗಿದ್ದರೂ ನನ್ನ ಪ್ರಕೃತಿಯನ್ನು ಆಶ್ರಯಿಸಿ ನನ್ನ ಮಾಯೆಯ ಮೂಲಕ ಅವತರಿಸುತ್ತೇನೆ. ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತರಿಸುತ್ತೇನೆ. ಸಾಧುಗಳ ರಕ್ಷಣಿಗಾಗಿ ದುಷ್ಟರ ವಿನಾಶಕ್ಕಾಗಿ ಪ್ರತಿ ಯುಗದಲ್ಲಿಯೂ ಅವತರಿಸುತ್ತೇನೆ. ಇದೇ ಅವತಾರದ ಪ್ರಯೋಜನ.

	ಕೃಷ್ಣ ಪರಬ್ರಹ್ಮದ ಅವತಾರ. ಪರಬ್ರಹ್ಮವೇ ವಿಷ್ಣು ಹರಿ ಎನಿಸಿರುವುದರಿಂದ ಕೃಷ್ಣ ವಿಷ್ಣುವಿನ ಅವತಾರವೂ ಆಗಿರುತ್ತಾನೆ. ಅರ್ಜುನ ಕೃಷ್ಣನನ್ನು ವಿಷ್ಣು ಎಂದು ಎರಡು ಸಲ ಸಂಬೋಧಿಸುತ್ತಾನೆ. ಸಂಜಯ ಕೃಷ್ಣನನ್ನು ಹರಿ ಎಂದು ಎರಡು ಸಲ ಕರೆದಿರುತ್ತಾನೆ.

	ಜೀವ ಮತ್ತು ಶರೀರ: ಪರಮಾತ್ಮನಿಗೆ ಅಚೇತನವಾದ ಅಪರಾಪ್ರಕೃತಿ ಮತ್ತು ಜೀವರೂಪನಾದ ಪರಾಪ್ರಕೃತಿ ಎಂಬ ಎರಡು ಪ್ರಕೃತಿಗಳು ಇರುವುವು. ಪರಮಾತ್ಮನ ಒಂದು ಸನಾತನ ಅಂಶವೇ ಜೀವರೂಪವಾಗಿದ್ದರೆ, ಇನ್ನೊಂದು ಅಂಶ ಪ್ರಕೃತಿರೂಪದಲ್ಲಿದೆ. ಈ ಎರಡು ಪ್ರಕೃತಿಗಳಿಂದ ಎಲ್ಲವೂ ಉತ್ಪನ್ನವಾಗಿವೆ. ಶರೀರವೇ ಜೀವನ ಭೋಗಕ್ಷೇತ್ರ. ಇದನ್ನು ಅರಿತುಕೊಂಡಿರುವವ ಕ್ಷೇತ್ರಜ್ಞ. ಕ್ಷೇತ್ರ ಯಾವಾಗಲೂ ವೃದ್ಧಿ-ಪರಿಣಾಮ-ನಾಶಗಳಿಂದ ಚಲನಾತ್ಮಕವಾಗಿರುತ್ತದೆ. ಕ್ಷೇತ್ರಜ್ಞ ಯಾವಾಗಲೂ ಅರಿಯುವವನೇ. ದೇವ-ಮನುಷ್ಯಾದಿ ಸರ್ವಕ್ಷೇತ್ರಗಳಲ್ಲಿಯೂ ಕ್ಷೇತ್ರಜ್ಞನಾಗಿರುವವ ಈಶ್ವರನೇ. ಎಲ್ಲ ಜೀವರಿಗೂ ಈಶ್ವರನೆ ಆತ್ಮನಾಗಿರುವುದರಿಂದ ಅರಿಯುವವ ಒಬ್ಬನೇ. ಪಂಚಮಹಾಭೂತಗಳು ಅಹಂಕಾರ, ಬುದ್ಧಿ, ಅದಕ್ಕೆ ಕಾರಣವಾದ ಅವ್ಯಾಕೃತ, ಇಂದ್ರಿಯಗಳು, ಮನಸ್ಸು, ಇಂದ್ರಿಯ-ವಿಷಯಗಳು, ಇಚ್ಛೆ, ದ್ವೇಷ, ಸುಖ ದುಃಖ ದೇಹೇಂದ್ರಿಯಗಳ ಗುಂಪು, ಅಂತಃಕರಣವೃತ್ತಿ ಧೃತಿ-ಇವು ಕ್ಷೇತ್ರ. ಆದರೆ ಜ್ಞೇಯವಾದ ಆತ್ಮತತ್ತ್ವ ಇಂದ್ರಿಯಗಳ ವ್ಯಾಪಾರಗಳಿಂದ ಬೆಳಗುತ್ತದೆ. ಸರ್ವೇಂದ್ರಿಯರಹಿತವಾದದ್ದು. ಆಸಕ್ತವಾದದ್ದು, ಎಲ್ಲಕ್ಕೂ ಆಸ್ಪದವಾದದ್ದು, ನಿರ್ಗುಣ ಮತ್ತು ಸಗುಣಗಳ ಭೋಕತ್ತø. ಶರೀರವಾಗಿರುವ ಪ್ರಕೃತಿ, ಜೀವನಾಗಿರುವ ಪುರುಷ-ಇವರಿಬ್ಬರಿಗೂ ಆದಿಯಿಲ್ಲ. ಪುರುಷ ಪ್ರಕೃತಿಯಲ್ಲಿದ್ದು ಕೊಂಡೇ ಪ್ರಕೃತಿಯಿಂದ ಹುಟ್ಟಿದ್ದಗುಣಗಳನ್ನು ಅನುಭವಿಸುತ್ತಾನೆ. ಇವನು ಒಳ್ಳೆಯ ಮತ್ತು ಕೆಟ್ಟ ಯೋನಿಗಳಲ್ಲಿ ಹುಟ್ಟುವುದಕ್ಕೆ ಗುಣಗಳ ಸಂಗವೇ ಕಾರಣ. ಸತ್ತ್ವ ರಜಸ್ಸು ತಪಸ್ಸು-ಇವು ಪ್ರಕೃತಿಯ ಗುಣಗಳು ಇವು ಪ್ರತಿಯೊಬ್ಬನನ್ನೂ ಕೆಲಸಮಾಡಲೂ ಪ್ರೇರಿಸುತ್ತವೆ. ಪ್ರಕೃತಿಯ ಗುಣಗಳು ನಿಜವಾಗಿ ಕೆಲಸಮಾಡುತ್ತವೆಯೇ ಹೊರತು ಪುರುಷನಲ್ಲ; ಆದರೆ ಅವನು ನಾನು ಕರ್ತೃಎಂದು ತಿಳಿಯುತ್ತಾನೆ. ಪ್ರಕೃತಿಯ ಗುಣಗಳು ಅವ್ಯಯನಾದ ಆತ್ಮನನ್ನು ಬಂಧಿಸುತ್ತವೆ. ಈ ಗುಣಗಳ ಆಧಿಕ್ಯ ಅಥವಾ ಅಲ್ಪತ್ವ ಮನುಷ್ಯನ ಸ್ವಭಾವವನ್ನು ನಿರ್ಣಯಿಸುತ್ತದೆ. ದೇಹೋತ್ಪತ್ತಿಗೆ ಕಾರಣವಾದ ಈ ಮೂರು ಗುಣಗಳನ್ನು ಯಾವನು ದಾಟುತ್ತಾನೆಯೋ ಅವನು ಅಮರನಾಗುತ್ತಾನೆ. ಜೀವನಿಗೆ ಮೋಕ್ಷವಾಗುವ ತನಕ ಪುನಃ ಪುನಃ ಜನ್ಮ ಮೃತ್ಯಗಳು ಉಂಟಾಗುತ್ತವೆ. ಮನುಷ್ಯ ಸಾಯುವಾಗ ಸ್ಥೂಲದೇಹ ಬಿಟ್ಟು-ಹಳೆಯಬಟ್ಟೆ ಬಿಟ್ಟು ಹೊಸಬಟ್ಟೆ ಉಡುವಂತೆ-ಸೂಕ್ಷ್ಮ ದೇಹದೊಂದಿಗೆ ಹೊರಗೆ ಹೋಗುತ್ತಾನೆ ಮತ್ತು ತನ್ನ ಕರ್ಮಕ್ಕೆ ಅನುಗುಣವಾಗಿ ಹೊಸ ಶರೀರ ಪಡೆಯುತ್ತಾನೆ. ಶುಕ್ಷಪಕ್ಷವೆಂಬ ಗತಿಯಲ್ಲಿ ಹೋದವ ಸಂಸಾರಕ್ಕೆ ಹಿಂತಿರುಗುವುದಿಲ್ಲ. ಕೃಷ್ಣಪಕ್ಷವೆಂಬ ಗತಿಯಲ್ಲಿ ಹೋದವ ಹಿಂತಿರುತ್ತಾನೆ.

	ಮಾಯೆ: ಮಾಯೆ ಎಂದರೆ ಮೋಹಗೊಳಿಸುವ ಶಕ್ತಿಯೇ ಹೊರತು ಅವಿದ್ಯೆಯಲ್ಲ. ಪ್ರಕೃತಿಯಲ್ಲ. ಇದನ್ನು ಮಿಥ್ಯೆಯೆಂದು ಹೇಳಲಾಗುವುದಿಲ್ಲ. ಇಂದ್ರ ಮಾಯೆಗಳ ಮೂಲಕ ಬಹುರೂಪದಿಂದ ಕಾಣುತ್ತಾನೆ ಎಂದು ಋಗ್ವೇದ ಹೇಳುತ್ತದೆ. ಇಡಿಯ ಜಗತ್ತನ್ನು ಮಾಯೆಯು ಸೃಷ್ಟಿಸುತ್ತಾನೆ; ಆದರೆ ಜೀವ ಮಾಯೆಯಿಂದ ಬದ್ಧನಾಗಿದ್ದಾನೆ. ಸ್ವಭವವೇ ಮಾಯೆ. ಮಹೇಶ್ವರನೇ ಮಾಯೆ ಎಂದು ಶ್ವೇತಾಶ್ವತರೋಪನಿಷತ್ತು ಹೇಳುತ್ತದೆ. ಈಶ್ವರ ತನ್ನ ಮಾಯಾಶಕ್ತಿಯಿಂದ ಪ್ರಕೃತಿಯ ಮತ್ತು ಅದರ ಗುಣಗಳ ಮೂಲಕ ತನ್ನ ಸ್ವರೂಪ ಮುಚ್ಚಿಕೊಂಡಿದ್ದಾನೆ. ಈ ಮಾಯೆಯ ಆವರಣ ಭೇದಿಸತಕ್ಕವ ಅವನ ಸ್ವರೂಪ ಅರಿತುಕೊಳ್ಳುತ್ತಾನೆ. ತಾನು ಜನ್ಮರಹಿತನಾಗಿದ್ದರೂ ತನ್ನ ಮಾಯೆಯನ್ನು ಆಶ್ರಯಿಸಿಕೊಂಡು ಅದರ ಮೂಲಕ ಅವತಾರಮಾಡುತ್ತೇನೆಂದು ಕೃಷ್ಣ ಹೇಳಿದ್ದಾನೆ. ಹೀಗಾಗದಿದ್ದರೆ ಹುಟ್ಟಿಲ್ಲದ ಪರಬ್ರಹ್ಮಕ್ಕೆ ಹುಟ್ಟುವಂತೆ ಕಾಣುವುದು ಸಾಧ್ಯವಾಗುತ್ತಿರಲಿಲ್ಲ. ಈ ತ್ರಿಗುಣಾತ್ಮಕವಾದ ದೈವೀಮಾಯೆಯನ್ನು ದಾಟುವುದು ಕಷ್ಟಸಾಧ್ಯವಾಗಿದೆ. ಆದರೆ ಅವನನ್ನೇ ಆಶ್ರಯಿಸುವವರು ಈ ಮಾಯೆಯನ್ನು ದಾಟುತ್ತಾರೆ. ಎಲ್ಲರೂ ತನ್ನನ್ನು ಆಶ್ರಯಿಸಲೆಂದು ಕೃಷ್ಣ ಮನುಷ್ಯರೂಪ ಹೊಂದಿದ್ದರೂ ಮೂಢರಾದ ಜನ ಇವನನ್ನು ಅರಿಯರು.

	ಧರ್ಮಾಧರ್ಮಗಳು: ಗೀತೆ ನೀತಿಶಾಸ್ತ್ರವೆನಿಸದಿದ್ದರೂ ಪಾಪಪುಣ್ಯಗಳಿಗೆ ಧರ್ಮಾ ಧರ್ಮಗಳಿಗೆ ವಿಶೇಷ ಪ್ರಾಧಾನ್ಯ ಕೊಟ್ಟಿದೆ. ಧರ್ಮವನ್ನೇ ಅನುಸರಿಸಬೇಕೆಂದು ಕೃಷ್ಣ ಅರ್ಜುನನಿಗೆ ಒತ್ತಿ ಒತ್ತಿ ಹೇಳಿರುವುದರಲ್ಲಿ ಆಶ್ಚರ್ಯವಿಲ್ಲ; ಏಕೆಂದರೆ ಧರ್ಮ ಸ್ಥಾಪನೆಗೋಸ್ಕರವೇ ಅವನು ಅವತರಿಸಿದ್ದಾನೆ. ಕಾಮವೇ ದೊಡ್ಡ ಪಾಪ. ಇದು ರಜೋಗುಣದಿಂದ ಹುಟ್ಟುತ್ತದೆ. ಬಯಸಿದುದು ಸಿಕ್ಕದಿದ್ದರೆ ಕಾಮವೇ ಕ್ರೋಧವಾಗುತ್ತದೆ. ಮನುಷ್ಯನಿಗೆ ಇದಕ್ಕಿಂತ ದೊಡ್ಡ ಶತ್ರುವಿಲ್ಲ. ಹೊಗೆಯಿಂದ ಅಗ್ನಿ ಮುಚ್ಚಲ್ಪಟ್ಟಿರುವಂತೆ ಕಾಮದಿಂದ ಜ್ಞಾನ ಮುಚ್ಚಲ್ಪಟ್ಟಿದೆ. ಇಂದ್ರಿಯ ಮನೋಬುದ್ಧಿಗಳೇ ಇದಕ್ಕೆ ಆಶ್ರಯ. ಆದ್ದರಿಂದ ಜ್ಞಾನವಿಜ್ಞಾನಗಳನ್ನು ನಾಶಮಾಡುವ ಈ ಪಾಪವನ್ನು ಮೊದಲು ನಾಶಮಾಡಬೇಕು. ಸ್ವಭಾವಕ್ಕೆ ಅನುಗುಣವಾದ ಸ್ವಧರ್ಮ ಬಿಟ್ಟು ಸ್ವೇಚ್ಛಾಚಾರಿಯಾಗಿ ಕಾಮವನ್ನು ಅನುಸರಿಸುವುದೇ ಪಾಪ ಮತ್ತು ಅಧರ್ಮ. ಕಾಮವನ್ನು ನಿಗ್ರಹಿಸಿ, ವೈಯಕ್ತಿಕ ರಾಗದ್ವೇಷಗಳನ್ನು ತೊರೆದು, ತನ್ನ ಗುಣಕರ್ಮಗಳಿಗೆ ಅನುಸಾರವಾಗಿ ತನ್ನ ಕರ್ತವ್ಯ ಪೂರೈಸುವುದೇ ಧರ್ಮ.

	ದೈವೀಸಂಪತ್ತಿಗೆ ಹುಟ್ಟಿರುವವನಿಗೆ ಅಭಯ ಸತ್ತ್ವಸಂಶುದ್ಧಿ ಮೊದಲಾದ ಗುಣಗಳು ಉತ್ಪನ್ನವಾಗುತ್ತವೆ. ದಂಭ ದರ್ಪ ಅಹಂಕಾರ ಮೊದಲಾದವು ಆಸುರೀ ಸಂಪತ್ತಿಗೆ ಹುಟ್ಟಿರುವವನಿಗೆ ಉಂಟಾಗುತ್ತವೆ. ದೈವೀಸಂಪತ್ತು ಮೋಕ್ಷಕ್ಕಾಗಿಯೂ ಅಸುರೀಸಂಪತ್ತು ಬಂಧಕ್ಕಾಗಿಯೂ ಇವೆ. ಅಸುರೀಸಂಪತ್ತಿಗೆ ಸೇರಿದ ಜನರಿಗೆ ಅಸುರೀಯೋನಿಗಳೇ ಗತಿ. ಕಾಮ-ಕ್ರೋಧ-ಲೋಭಗಳೇ ಆತ್ಮನಾಶಕ್ಕೆ ಕಾರಣವಾದ ನರಕದ್ವಾರಗಳು. ಇವುಗಳಿಂದ ಮುಕ್ತನಾದವ ಶ್ರೇಯಸ್ಸನ್ನೂ ಪರಗತಿಯನ್ನೂ ಹೊಂದುತ್ತಾನೆ.

	ಸ್ವಧರ್ಮಾಚರಣೆ, ಅಧರ್ಮತ್ಯಾಗ-ಇವು ಜೀವನದ ಅಂತಿಮ ಧ್ಯೇಯಗಳಲ್ಲ. ಆತ್ಮದರ್ಶನಕ್ಕೆ ಮಾರ್ಗಗಳು ಏಕೆಂದರೆ ಅಧರ್ಮದಿಂದ ಬಂಧವೂ ಧರ್ಮದಿಂದ ಮೋಕ್ಷವೂ ಉಂಟಾಗುತ್ತವೆ. ಪಾಪಪುಣ್ಯಗಳನ್ನೂ ಧರ್ಮಾಧರ್ಮಗಳನ್ನೂ ತೊರೆದು ಭಗವದನುಭವ ಪಡೆಯುವುದೇ ನಿಜವಾದ ಪುರುಷಾರ್ಥ. ಶಾಶ್ವತ ಧರ್ಮ. ಆದ್ದರಿಂದ ಸರ್ವಧರ್ಮಗಳನ್ನೂ ತೊರೆದು ತನ್ನನ್ನೇ ಶರಣುಹೊಂದಬೇಕೆಂದೂ ತಾನು ಪ್ರಪನ್ನರನ್ನು ಸರ್ವ ಪಾಪಗಳಿಂದ ಬಿಡಿಸುತ್ತೇನೆಂದೂ ಕೃಷ್ಣ ಅರ್ಜುನನಿಗೆ ಅಭಯ ನೀಡುತ್ತಾನೆ.

	ಇಚ್ಛಾಸ್ವಾತಂತ್ರ್ಯ: ಜೀವಾತ್ಮ ತನಗೆ ಬೇಕಾದ ಹಾಗೆ ನಡೆಯಲು ಸ್ವತಂತ್ರನಾಗಿದ್ದಾನೆಯೇ? ಈಶ್ವರ ಪ್ರಾಣಿಗಳನ್ನೆಲ್ಲ ಯಂತ್ರಾರೂಢವಾದ ಬೊಂಬೆಗಳಂತೆ ತಿರುಗಿಸುತ್ತಿದ್ದರೆ ಇವರಿಗೆ ನಿಜವಾದ ಸ್ವಾತಂತ್ರ್ಯವೆಲ್ಲಿ? ಜೀವನೇ ಮಿಥ್ಯೆಯಾಗಿರುವುದರಿಂದ ನಿಜವಾದ ಸ್ವಾತಂತ್ರ್ಯವಿಲ್ಲ ಎಂದು ಕೆಲವು ಪಾಶ್ಚತ್ಯಪಂಡಿತರ ಅಭಿಪ್ರಾಯ. ಆದರೆ, ಗೀತೆಯ ಪರಿಹಾರ ಹೀಗಿದೆ: ಮನುಷ್ಯ ಎಲ್ಲಿಯತನಕ ಅಹಂಕಾರವನ್ನು ಆಶ್ರಯಿಸಿ ನಾನು ಮಾಡುತ್ತೇನೆ ನಾನು ಮಾಡುವುದಿಲ್ಲ ಎಂದು ಸಂಕಲ್ಪಿಸುವನೋ ಅಲ್ಲಿಯತನಕ ಅವನಿಗೆ ಸ್ವಾತಂತ್ರ್ಯವಿಲ್ಲ. ಅರ್ಜುನ ಅಹಂಕಾರವನ್ನು ಆಶ್ರಯಿಸಿ ಯುದ್ಧಮಾಡುವುದಿಲ್ಲ ಎಂದು ಹೇಳಿದ. ಅವನ ಈ ನಿಶ್ಚಯ ಮಿಥ್ಯೆ; ಏಕೆಂದರೆ ಸ್ವಭಾವವೇ ಅವನನ್ನು ಕರ್ಮದಲ್ಲಿ ಪ್ರೇರಿಸುತ್ತದೆ. ಭಗವಂತನನ್ನೇ ಸರ್ವಾತ್ಮನಾಗಿ ಶರಣುಹೊಂದಿದರೆ ಅವನ ಇಚ್ಛೆ ಭಗವಂತನ ಸಂಕಲ್ಪದೊಡನೆ ಒಂದಾಗಿ ಅಪ್ರತಿಹವಾಗುವುದು. ಭಗವತ್ಸಂಕಲ್ಪಕ್ಕೆ ಹೊಂದಿಕೊಂಡಿರುವುದು ಸ್ವಾತಂತ್ರ್ಯ. ಅದಕ್ಕೆ ವಿರೋಧವಾಗಿರುವುದು ದಾಸ್ಯ.

	ಯೋಗ: ಚಿತ್ತವೃತ್ತಿಗಳ ನಿರೋಧವೇ ಯೋಗವೆಂದು ಯೋಗಸೂತ್ರ ಹೇಳುತ್ತದೆ. ಆದರೆ ಈ ಶಬ್ಬಕ್ಕೆ ಗೀತೆಯಲ್ಲಿ ವ್ಯಾಪಕ ಅರ್ಥವಿದೆ, ಚಿತ್ತವೃತ್ತಿಗಳ, ಭಾವಗಳ ಮತ್ತು ಸಂಕಲ್ಪಗಳ ನಿಗ್ರ್ರಹ ಸಾಮಾನ್ಯವಾಗಿ ಯೋಗವೆನಿಸಿದ್ದರೂ ಭಗವಂತನಲ್ಲಿ ಸಾಯುಜ್ಯ ಪಡೆಯುವುದೇ ಯೋಗದ ನಿಜವಾದ ಅರ್ಥ. ಭಗವಂತನಲ್ಲಿ ಸಾಯುಜ್ಯ ಹೊಂದಬೇಕಾದರೆ ಸರಿಯಾದ ಕರ್ಮ-ಜ್ಞಾನ-ಭಕ್ತಿಗಳೇ ಬೇಕಾಗಿರುವುದರಿಂದ ಕರ್ಮಯೋಗ ಜ್ಞಾನಯೋಗ ಭಕ್ತಿಯೋಗ ಎಂಬ ಪ್ರಭೇದಗಳಿವೆ. ಯೋಗಗಳೂ ಮೂರೇ ಎಂಬ ನಿಯಮ ಗೀತೆಯಲ್ಲಿಲ್ಲ. ಬುದ್ದಿ ಯೋಗ ಧ್ಯಾನಯೋಗ ಸಂನ್ಯಾಸಯೋಗ ಎಂಬ ಇತರ ಯೋಗಗಳೂ ಕಂಡುಬರುತ್ತವೆ. ಯೋಗಗಳಲ್ಲಿ ಹೀಗೆ ವಿಶ್ಲೇಷಣಿಯನ್ನು ಮಾಡಿರುವುದು ಅವುಗಳ ಭಿನ್ನತೆ ಸೂಚಿಸುವುದಕ್ಕಲ್ಲ. ಜನರ ಅರಿವಿಗೆ ತಿಳಿಯಲೆಂದು. ಯೋಗಗಳು ಒಂದಕ್ಕೊಂದು ಅನುಪೂರಕವಾಗಿವೆ. ಕರ್ಮಮಾರ್ಗದಿಂದ ಜ್ಞಾನಮಾರ್ಗ ಬೇರ್ಪಡಿಸಬಹುದು; ಭಕ್ತಿಗಮ್ಯನಾದ ಭಗವಂತನನ್ನು ಬಿಟ್ಟು ಅವ್ಯಕ್ತೋಪಾಸನ ಮಾಡಬಹುದು. ಆದರೆ ದೇಹಾಭಿಮಾನವುಳ್ಳವರಿಗೆ ಅವ್ಯಕ್ತವೆಂಬ ಗತಿ ದುರ್ಲಭವಾಗಿರುತ್ತದೆಂದು ಕೃಷ್ಣ ಹೇಳುತ್ತಾನೆ. ಆಧ್ಯಾತ್ಮಿಕ ಜೀವನದಲ್ಲಿ ಅನ್ಯೋನ್ಯ ಪ್ರಭಾವವಿಲ್ಲದ ಪರ್ವಗಳಿಲ್ಲ. ಯಾವಾಗ ಕರ್ಮ ನಿಂತು ಜ್ಞಾನ ಪ್ರಾರಂಭವಾಗುವುದು ಅಥವಾ ಜ್ಞಾನ ನಿಂತು ಭಕ್ತಿ ಪ್ರಾರಂಭವಾಗುವುದು ಎಂದು ಹೇಳಲಾಗುವುದಿಲ್ಲ. ಭಕ್ತ ಜ್ಞಾನಿಯೂ ಆಗಿರುತ್ತಾನೆ, ಜ್ಞಾನಿ ಭಕ್ತನೂ ಆಗಿರುತ್ತಾನೆ. ಕರ್ಮಜ್ಞಾನ, ಭಕ್ತಿ-ಇವುಗಳ ಅವಶ್ಯಕತೆ ಸಮಾನವಾಗಿದ್ದರೂ ಇವುಗಳ ನ್ಯೂನಾಧಿಕ್ಯಗಳು ಸಾಧಕನ ಸ್ವಭಾವವನ್ನೂ ಶಕ್ತಿಯನ್ನೂ ಅವಲಂಬಿಸಿರುತ್ತವೆ. ಆದರೆ ಮೊತ್ತಮೊದಲು ಸ್ವಾರ್ಥರಹಿತವಾದ ಕರ್ಮ ಚಿತ್ತಶುದ್ಧಿಗೆ ಅನಿವಾರ್ಯವಾದದ್ದು, ಅನಂತರ ಜ್ಞಾನ ಅವಶ್ಯಕವಾಗಿದೆ, ಕೊನೆಗೆ ಕೃಷ್ಣ ಭಕ್ತಿಯೇ ಸಾಯುಜ್ಯಕ್ಕೆ ಸಾಕ್ಷಾತ್ಸಾಧನವಾಗಿದೆ ಎಂಬುದು ಗೀತೆಯ ಪ್ರವಣತೆಯನ್ನು ತೋರಿಸುತ್ತದೆ.

	ಕರ್ಮಯೋಗ: ಪ್ರತಿಯೊಬ್ಬ ಮನುಷ್ಯನು ತನ್ನ ಕರ್ಮಕ್ಕೆ ಅನುಸಾರವಾದ ಫಲ ಅನುಭವಿಸಬೇಕೆಂದು ಅತ್ಯಂತ ಪ್ರಾಚೀನ ತತ್ತ್ವ. ಈ ಕರ್ಮ ಪರಂಪರೆಯೇ ಮಾನವನ ದೇಹಾಂತರ ಪ್ರಾಪ್ತಿಗೆ ಕಾರಣವಾಗಿ ಮೋಕ್ಷಕ್ಕೆ ವಿರೋಧಿಯಾಗಿರುವುದು. ಕರ್ಮಫಲದ ಘೋರನಿಯಮವನ್ನು ಕಡೆಗಣಿಸಿ ಯಾವಾಗಲೂ ಫಲವನ್ನು ಅಪೇಕ್ಷಿಸುವ ಒಂದು ಪಕ್ಷವಿದ್ದರೆ ಕರ್ಮವನ್ನು ಮಾಡಿದರೆ ಅದರ ಫಲವುಂಟಾಗುವುದರಿಂದ ಕರ್ಮವೇ ಬೇಡೆನ್ನುವ ಮತ್ತೊಂದು ಪಕ್ಷವಿದೆ. ಗೀತಾಕರ್ತೃ ಮಧ್ಯಮಾರ್ಗವನ್ನು ಹಿಡಿದು ಪರಸ್ಪರ ವಿರುದ್ಧವಾದ ಎರಡು ಪಕ್ಷಗಳನ್ನು ನಿರಾಕರಿಸಿದ್ದಾನೆ.

	ಭಗವದ್ಗೀತೆಯ ಕಾಲದಲ್ಲಿ ಕರ್ಮಮಾರ್ಗ ಹೆಚ್ಚು ಬಳಕೆಯಲ್ಲಿತ್ತು. ಫಲದಾಶೆಯಿಂದ ದೂಷಿತವಾದ ಕರ್ಮಮಾರ್ಗದಲ್ಲಿ ಗೀತೆಗೆ ಪ್ರವಣತೆಯಿಲ್ಲದಿದ್ದರೂ ಅದು ಯಜ್ಞಮಾರ್ಗವನ್ನು ಪೂರ್ಣವಾಗಿ ನಿರಾಕರಿಸಲಿಲ್ಲ. ಯಜ್ಞ ದಾನ ತಪಸ್ಸು ಎಂಬ ಕರ್ಮವನ್ನು ಬಿಡಕೂಡದು. ಅವು ಮನೀಷಿಗಳನ್ನು ಪಾವನಗೊಳಿಸುತ್ತವೆ. ಯಜ್ಞ ಲೋಕ ಹಿತಕ್ಕೆ ಅವಶ್ಯಕ. ಆದರೆ ಯಾಜ್ಞಿಕರು ಕ್ಷುದ್ರ ಫಲಗಳನ್ನು ಬಯಸದೆ ಕೇವಲ ಕಾಮ್ಯ ಕರ್ಮಗಳಲ್ಲಿ ಆಸಕ್ತರಾಗಕೂಡದು. ಕರ್ಮ ಬಿಡಲು ಮನುಷ್ಯನಿಗೆ ಅಸಾಧ್ಯವಾದುದರಿಂದ ಕರ್ಮಾನುಷ್ಠಾನದಲ್ಲಿ ದೋಷವಿಲ್ಲ. ಅಕರ್ಮದಿಂದ ಲೋಕ ನಾಶವಾಗುತ್ತದೆ. ಕೃಷ್ಣನಿಗೆ ಮೂರು ಲೋಕಗಳಲ್ಲಿಯೂ ಯಾವ ಕರ್ತವ್ಯವೂ ಇರುವುದಿಲ್ಲ. ಹೊಂದಬೇಕಾದದ್ದು ಯಾವುದೂ ಇಲ್ಲದಿದ್ದರೂ ಕರ್ಮದಲ್ಲಿ ಪವೃತ್ತನಾಗಿದ್ದಾನೆ. ಅವನು ಜಾಗರೂಕನಾಗಿ ಕರ್ಮದಲ್ಲಿ ಪ್ರವೃತ್ತನಾಗದಿದ್ದರೆ ಮನುಷ್ಯರು ಇವನನ್ನೇ ಅನುಸರಿಸುತ್ತಾರೆ. ಆಗ ಲೋಕಗಳೆಲ್ಲ ನಾಶವಾಗಿ, ಅಂಥ ಅವ್ಯವಸ್ಥೆಗೆ ಕೃಷ್ಣನೇ ಕಾರಣನಾಗಿರುತ್ತಾನೆ. ಕೃಷ್ಣನಿಗಿಂತ ದೊಡ್ಡ ಕರ್ಮಯೋಗಿ ಇಲ್ಲ. ಕರ್ಮಮಾಡುತ್ತಿದ್ದರೂ ಕರ್ಮಬಂಧದಿಂದ ತಪ್ಪಿಸಿಕೊಳ್ಳಲು ಕೃಷ್ಣ ಕರ್ಮಯೋಗದ ಮೂಲಕ ದಾರಿ ತೋರಿಸಿಕೊಟ್ಟಿದ್ದಾನೆ. ಕರ್ಮ ಮಾಡುವಉದ್ದೇಶ ಎಂದರೆ ಫಲಾನುಸಂಧಿ ಮನುಷ್ಯನನ್ನು ಕಟ್ಟಿಹಾಕುತ್ತದೆಯೇ ಹೊರತು ಕೇವಲ ಕರ್ಮಾನುಷ್ಠಾನ ಬಂಧವನ್ನುಂಟುಮಾಡುವುದಿಲ್ಲ. ಕರ್ಮಫಲತ್ಯಾಗವೇ ನಿಜವಾದ ತ್ಯಾಗ ಸಂನಾಸ್ಯ ಮತ್ತು ಯೋಗ.

	ತಾನಾಗಿ ಬಂದದ್ದರಲ್ಲಿ ತೃಪ್ತಿಯುಳ್ಳವನೂ ಶೀತೋಷ್ಣ-ದ್ವಂದ್ವಗಳನ್ನು ಸಹಿಸಿ ಕೊಳ್ಳುವವನೂ ಲಾಭಲಾಭಗಳಿಗೆ ಸಮಬುದ್ಧಿಯುಳ್ಳವನೂ ಆದ ಯೋಗಿ ಕರ್ಮವನ್ನು ಮಾಡಿದರೂ ಬದ್ಧನಾಗುವುದಿಲ್ಲ. ಯಜ್ಞಕ್ಕಾಗಿ ಕರ್ಮ ಮಾಡುವವನಿಗೆ ಕರ್ಮ ನಿಃಶೇಷವಾಗಿ ನಾಶವಾಗುತ್ತದೆ. ನಾವು ಮಾಡುವ ಕರ್ಮವನ್ನೆಲ್ಲ ಭಗವಂತನಿಗೆ ಸರ್ಮಪಿಸಬೇಕು. ಇಷ್ಟ ಅನಿಷ್ಟ ಮಿಶ್ರ ಎಂಬ ತ್ರಿವಿಧ ಕರ್ಮ ಕೇವಲ ಕರ್ಮನಿಷ್ಠರಾದ ಅಜ್ಞಾನಿಗಳಿಗೆ ಉಂಟಾಗುತ್ತವೇ ಹೊರತು ಕತೃತ್ವಾದಿಗಳನ್ನು ಬಿಟ್ಟಿರುವ ತ್ಯಾಗಿಗಳಿಗಲ್ಲ. ಮನುಷ್ಯ ತನ್ನ ಕರ್ಮದ ಬಾಹ್ಯಪ್ರಯೋಜನವನ್ನು ಕಡೆಗಣಿಸಿ ಕರ್ಮಗಳಿಂದ ಉಂಟಾಗುವ ಮಾನಸಿಕ ಅಥವಾ ಆಧ್ಯಾತ್ಮಿಕ ಪ್ರತಿಕ್ರಿಯೆಯನ್ನು ಅವಲೋಕಿಸಿದರೆ, ಕರ್ಮದ ಜಾಡ್ಯ ತೊಲಗಿ ಜೀವನದಲ್ಲಿ ನವಚೇತನ ಮೂಡುವುದು. ಮನಸ್ಸಿನ ಅಂತರಾಳದ ಅಂಧಕಾರದಲ್ಲಿ ಹುದುಗಿಕೊಂಡಿರುವ ಪರಸ್ಪರ ವಿರೋಧಿಗಳಾದ ಉದ್ದೇಶಗಳೂ ಬಯಕೆಗಳೂ ನಾಶವಾಗಿ ಒಂದು ಮುಖ್ಯೊದ್ದೇಶ ಹುಟ್ಟುತ್ತದೆ. ಕರ್ಮ ಯೋಗದಲ್ಲಿ ನಿಶ್ಚಯ ಸ್ವಭಾವವುಳ್ಳ ಬುದ್ಧಿಗೆ ಒಂದೇ ನಿಷ್ಠೆಯಿರುತ್ತದೆ: ಆದರೆ ನಿಶ್ಚಯ ಸ್ವಭಾವವಿಲ್ಲದವರ ಬುದ್ಧಿ ಸಹಸ್ರ ಶಾಖೆಗಳಾಗಿ ಒಡೆದುಹೋಗುತ್ತದೆ. ಇಂಥ ಏಕನಿಷ್ಠೆ ಏಕೋದ್ದೇಶ ಯಾವುದಾಗಿರಬಹುದು? ಯಾವ ಸಾಂಸಾರಿಕ ಬಯಕೆಯೂ ಆಗಲಾರದು: ಭಗವದನುಭವ ಜೀವನದ ಏಕನಿಷ್ಟೆ ಏಕೋದ್ದೇಶ.

	ಕಾಮ್ಯಕರ್ಮಗಳನ್ನು ಮಾಡುತ್ತಿರುವಾಗ ಫಲ ತನ್ನ ಇಚ್ಛಾನುಸಾರವಾಗಿಯೇ ಆಗಬೇಕೆಂದು ಬಯಸುವವ ಮೂಢ. ಏಕೆಂದರೆ ಕಾಮ್ಯಕರ್ಮಗಳಿಗೆ ತನಗೆ ಅನುಕೂಲವಾದ ಫಲವಾಗಬೇಕೆಂಬ ನಿಯಮವಿಲ್ಲ. ಜೀವನದಲ್ಲಿ ಮನುಷ್ಯನಿಗೆ ಹೆಚ್ಚು ಪರಾಜಯವೇ ಆಗುತ್ತದೆ. ಆದರೆ ಆಧ್ಯಾತ್ಮಿಕ ದೃಷ್ಟಿಯಿಂದ ಮಾಡಿದ ಕರ್ಮಕ್ಕೆ ಪರಾಜಯವಿಲ್ಲ. ಏಕೆಂದರೆ ಪ್ರತಿಯೊಂದು ಒಳ್ಳೆಯ ಕರ್ಮವೂ ಆಲೋಚನೆಯೂ ಆತ್ಮನನ್ನು ಉದ್ಧರಿಸುತ್ತದೆ. ಈ ನಿಷ್ಕಾಮಕರ್ಮಯೋಗದಲ್ಲಿ ಒಮ್ಮೆ ಪ್ರಾರಂಭಿಸಿದ ಕರ್ಮ ನಾಶವಾಗುವುದಿಲ್ಲ; ಪ್ರಾರಂಭಿಸಿ ಬಿಟ್ಟುದಕ್ಕಾಗಿ ಯಾವ ದೋಷವೂ ಉಂಟಾಗುವುದಿಲ್ಲ. ಈ ಕರ್ಮಯೋಗವೆಂಬ ಧರ್ಮದ ಅಲ್ಪಾನುಷ್ಠಾನ ಕೂಡ ಮಹಾ ಭಯದಿಂದ ಕಾಪಾಡುತ್ತದೆ. ಕರ್ಮದಲ್ಲಿ ಅಕರ್ಮವನ್ನೂ ಅಕರ್ಮದಲ್ಲಿ ಕರ್ಮವನ್ನೂ ನೋಡುವವನು ಮನುಷ್ಯರಲ್ಲಿ ಬುದ್ಧಿವಂತ, ಯುಕ್ತ ಮತ್ತು ಸಕಲಕರ್ಮಗಳನ್ನೂ ಮಾಡಿದವ.

	ನಿಷ್ಕಾಮಕರ್ಮಯೋಗದಲ್ಲಿ ಯೋಗಿಗೆ ಫಲವೇ ಇಲ್ಲ ಎಂದು ಹೇಳಲಾಗುವುದಿಲ್ಲ. ಹೊರಗೆ ಉಂಟಾಗಬಹುದಾದ ಕ್ಷುದ್ರಫಲಗಳಲ್ಲಿ ಆಶೆಯಿಲ್ಲದಿದ್ದರೆ ಅಂತರಿಕ ಜೀವನ ವಿಕಸನಗೊಳ್ಳುತ್ತದೆ. ಕ್ಷುದ್ರ ಫಲಗಳಿಂದ ಮನಸ್ಸನ್ನು ತಿರುಗಿಸುವ ಮಟ್ಟಿಗೆ ಕರ್ಮಯೋಗ ಅನಾಸಕ್ತವಾಗಿದೆಯೆಂದು ಹೇಳಬಹುದು. ಕರ್ಮಯೋಗಕ್ಕೆ ಅದೃಶ್ಯವಾದ ಎರಡು ನಿತ್ಯಫಲಗಳಿವೆ: ಮೊದಲನೆಯದುಚಿತ್ತ ಶುದ್ಧಿಯ ದ್ವಾರಾ ಆತ್ಮಜ್ಞಾನಕ್ಕೆ ಕಾರಣವಾಗುವಿಕೆ; ಎರಡನೆಯದು ಭಗವತ್ಸಾಕ್ಷಾತ್ಕಾರ.

	ಜ್ಞಾನಯೋಗ: ಉಪನಿಷತ್ತುಗಳಲ್ಲಿ ಜ್ಞಾನಕ್ಕೆ ವಿಶೇಷ ಪ್ರಾಧಾನ್ಯವುಂಟು ಅರಿಯುವುದೆಂದರೆ ಹೊಂದುವುದು. ಬ್ರಹ್ಮವಿದ ಬ್ರಹ್ಮವೇ ಆಗುತ್ತಾನೆ. ಜ್ಞಾನ ಧರ್ಮಾಧರ್ಮಗಳನ್ನೂ ಪಾಪಪ್ಮಣ್ಯಗಳನ್ನೂ ದಹಿಸುತ್ತದೆ. ಅನಾತ್ಮದೊಂದಿಗೆ ಇರುವ ತಾದಾತ್ಮ್ಯ ಬಿಟ್ಟು ತಾನು ಶುದ್ಧನಾದ ಆತ್ಮನೆಂದು ಅರಿತು ಕೊಂಡರೆ ಜೀವನ ಹರ್ಷಶೋಕಗಳು ನಾಶವಾಗುತ್ತವೆ.

	ನಾಲ್ಕು ಬಗೆಯ ಜನರು ಭಗವಂತನನ್ನು ಆರಾಧಿಸುತ್ತಾರೆ: ಸಂಕಟಕ್ಕೆ ಸಿಕ್ಕಿ ದೀನರಾದವರು; ಜಿಜ್ಞಾಸೆಗಳು; ಧನವನ್ನು ಬಯಸುವವರು; ಜ್ಞಾನಿಗಳು, ಇವರಲ್ಲಿ ಯಾವಾಗಲೂ ಭಗವಂತನಲ್ಲಿಯೇ ನಿಷ್ಠೆಯುಳ್ಳವನೂ ಭಗವಂತನಲ್ಲಿಯೇ ಭಕ್ತಿಯುಳ್ಳವನೂ ಆದ ಜ್ಞಾನಿ ಶ್ರೇಷ್ಠ; ಕೃಷ್ಣ ಜ್ಞಾನಿಗೆ ಅತ್ಯಂತಪ್ರಿಯ ಮತ್ತು ಜ್ಞಾನಿ ಕೃಷ್ಣನಿಗೆ ಪ್ರಿಯ ಇವರೆಲ್ಲ ಉದಾರಿಗಳಾದರೂ ಜ್ಞಾನಿ ಕೃಷ್ಣನ ಆತ್ಮನೇ ಆಗಿರುತಾನೆ. ಶ್ರೇಷ್ಠವಾದ ಜ್ಞಾನ ಯಾವ ರೂಪದಲ್ಲಿದೆ ಎಂಬುದನ್ನು ಕೃಷ್ಣನೇ ಹೇಳುತ್ತಾನೆ. ಬಹುಜನ್ಮಗಳ ಕೊನೆಯಲ್ಲಿ ಜ್ಞಾನವಂತನವಾಗಿ ವಾಸುದೇವನೇ ಸರ್ವವೂ ಎಂದು ಕೃಷ್ಣನನ್ನೇ ಹೊಂದುತ್ತಾನೆ. ಅಂಥ ಮಹಾತ್ಮ ಅತ್ಯಂತ ದುರ್ಲಭ. ಸರ್ವಕರ್ಮವೂ ಜ್ಞಾನದಲ್ಲಿ ನಿಃಶೇಷವಾಗಿ ಪರಿಸ ಮಾಪ್ತಿ ಹೊಂದುತ್ತದೆ. ಜ್ಞಾನ ಪಡೆದುಕೊಂಡರೆ ಪುನಃ ಮೋಹ ಉಂಟಾಗುವುದಿಲ್ಲ. ಜ್ಞಾನದಿಂದ ಸರ್ವಭೂತಗಳನ್ನು ಆತ್ಮನಲ್ಲಿಯೂ ಕೃಷ್ಣನಲ್ಲಿಯೂ ನೋಡಬಹುದು. ಎಷ್ಟೇ ಪಾಪ ಮಾಡಿದ್ದರೂ ಅದೆಲ್ಲವನ್ನೂ ಜ್ಞಾನವೆಂಬ ನಾವೆಯಿಂದ ದಾಟಬಹುದು.

	ಜ್ಞಾನಕ್ಕೆ ಎರಡು ಹಂತಗಳಿವೆ: ಮೊದಲನೆಯದಾಗಿ ಜಿಜ್ಞಾಸು ಆತ್ಮ ಪ್ರಕೃತಿಗಿಂತ ಭಿನ್ನನೆಂದೂ ಆತ್ಮನೇ ನಿತ್ಯವಸ್ತುವೆಂದೂ ಅವಿನಾಶಿಯೆಂದೂ ಅರಿತು ಕೊಳ್ಳಬೇಕು. ಕೇವಲ ಆತ್ಮಜ್ಞಾನದಿಂದ ಜ್ಞಾನ ಪೂರ್ಣವಾಗುವುದಿಲ್ಲ. ಎರಡನೆಯದಾಗಿ ತನಗೂ ಪರಮಾತ್ಮನಿಗೂ ಇರುವ ನಿಕಟಸಂಬಂಧವನ್ನೂ ವಾಸುದೇವನ ಸಾರ್ವಾತ್ಮ್ಯವನ್ನೂ ಅರಿತುಕೊಳ್ಳಬೇಕು. ಕರ್ಮಯೋಗದ ಅನುಷ್ಠಾನದಲ್ಲಿ ಮತ್ತು ಭಕ್ತಿಯೋಗದ ಅಭ್ಯಾಸದಲ್ಲಿ ಜ್ಞಾನ ಸರ್ವದಾ ಪ್ರಜ್ವಲಿಸುತ್ತಲೇ ಇರುತ್ತದೆ. ಯಾವನ ಕರ್ಮಗಳು ಜ್ಞಾನಾಗ್ನಿಯಿಂದ ದಹಿಸಲ್ಪಟ್ಟಿವೆಯೋ ಅವನು ಪಂಡಿತ. ಈ ಲೋಕದಲ್ಲಿ ಜ್ಞಾನಕ್ಕೆ ಸಮಾನವಾದ ಪವಿತ್ರವಸ್ತುವಿಲ್ಲ.

	ಭಕ್ತಿಯೋಗ: ಕರ್ಮಯೋಗದ ಅನುಷ್ಠಾನದಲ್ಲಿರುವಾಗ ಫಲಾಪೇಕ್ಷೆಯನ್ನೂ ಕರ್ತೃತ್ವವನ್ನೂ ಬಿಟ್ಟುಕೂಡಲೇ ಸಾಧಕ ಭಗವಂತನ ಸಂಕಲ್ಪಕ್ಕೆ ಅನುಕೂಲನಾಗುತ್ತಾನೆ. ಹೀಗೆಯೇ ಶರೀರಾದಿಗಳಲ್ಲಿರುವ ಅಭಿಮಾನ ಬಿಟ್ಟು ವಾಸುದೇವನೇ ಸರ್ವವೂ ಎಂಬ ಜ್ಞಾನ ಉದಯಿಸಿದ ಕೂಡಲೇ ಭಕ್ತನಾಗುತ್ತಾನೆ. ಭಗವಂತನನ್ನು ಹೊಂದಲು ಭಕ್ತ ಅನುಷ್ಠಿಸುವ ಪ್ರೇಮಮಾರ್ಗಕ್ಕೆ ಭಕ್ತಿಯೆಂದು ಹೆಸರು. ಕರ್ಮಯೋಗದ ಮೂಲ ಉಪನಿಷತ್ತಿನಲ್ಲಿರುವಂತೆಯೇ ಭಕ್ತಿ ಯೋಗವೂ ಉಪನಿಷತ್ತುಗಳಲ್ಲಿ ಹುಟ್ಟಿ ಬಂದಿದೆ. ಉಪನಿಷತ್ತುಗಳ ಉಪಾಸನೆಗಳೆಲ್ಲವೂ ಭಕ್ತಿ ಮಾರ್ಗವೇ. ವೇದಗಳಲ್ಲಿ ವರುಣಾದಿ ದೇವತೆಗಳನ್ನು ಕುರಿತು ಪ್ರಾರ್ಥಿಸಿದ ಮಂತ್ರಗಳೆಲ್ಲವೂ ಭಕ್ತಿಮಯವಾಗಿವೆ. ಭಕ್ತಿಯೇ ಕರ್ಮ ಮಾರ್ಗಕ್ಕೂ ಜ್ಞಾನಮಾರ್ಗಕ್ಕೂ ಪ್ರಾಣ ಕೊಟ್ಟಿದೆಯೆಂದು ಹೇಳಬಹುದು. ಭಕ್ತಿಯಿಲ್ಲದಿದ್ದರೆ ಕರ್ಮಜ್ಞಾನಗಳು ನೀರಸವೂ ಅರ್ಥಶೂನ್ಯವೂ ಆದ ಪಂಥಗಳಾಗುತ್ತಿದ್ದುವು.

	ಗೀತೆಯಲ್ಲಿ ಪ್ರತಿಪಾದಿತವಾದ ಭಕ್ತಿ ಅತ್ಯಂತ ಶುದ್ಧವಾಗಿದೆ. ಭಾವೋದ್ರೇಕ ಭಕ್ತಿಯಲ್ಲ, ಕ್ಷುದ್ರವೂ ಅನಿತ್ಯವೂ ಆದ ವಸ್ತುಗಳ ಮೇಲೆ ಸುರಿಸುವ ಸಾಂಸಾರಿಕ ಪ್ರೀತಿ ಭಕ್ತಿಯಲ್ಲ. ಅರ್ಜುನನಿಗೆ ಅಥವಾ ಉದ್ಧವನಿಗೆ ಕೃಷ್ಣನ ಮೇಲೆ ಇದ್ದ ಶ್ರದ್ಧಾಪೂರ್ವಕವಾದ ಪ್ರೇಮವೇ ಭಕ್ತಿ. ಕೃಷ್ಣನಿಗೆ ಮಾನವಕೋಟಿಯ ಮೇಲೆ ಇದ್ದ ಅಹೇತುಕ ಪ್ರೇಮವೇ ಭಕ್ತಿ. ಶ್ರದ್ಧಾಜ್ಞಾನಗಳು ಗೀತೆಯಲ್ಲಿ ಪ್ರತಿಪಾದಿತವಾಗಿರುವ ಭಕ್ತಿಗೆ ತಳಹದಿಯಾಗಿವೆ.

	ಅನಿರ್ದೇಶ್ಯವೂ ಅವ್ಯಕ್ತವೂ ಅಚಿಂತ್ಯವೂ ಆದ ಅಕ್ಷರವನ್ನು ಉಪಾಸಿಸುವವನೂ ಕೃಷ್ಣನನ್ನೇ ಹೊಂದುತ್ತಾನೆ. ಆದರೆ ಅವ್ಯಕ್ತೋಪಾಸಕರಿಗೆ ಕ್ಲೇಶ ಹೆಚ್ಚಾಗಿರುತ್ತದೆ. ಏಕೆಂದರೆ ದೇಹವುಳ್ಳವರಿಗೆ ಅವ್ಯಕ್ತವೆಂಬ ಗತಿ ಸುಲಭವಾಗಿ ದೊರಕುವುದಿಲ್ಲ. ಆದ್ದರಿಂದ ಕೃಷ್ಣನಲ್ಲಿ ಮನಸ್ಸು ನಿಲ್ಲಿಸಿ, ನಿತ್ಯಯುಕ್ತವಾಗಿ ಅವನನ್ನೇ ಉಪಾಸಿಸುವವ ಯುಕ್ತತಮ. ಪರಮಪುರುಷನೂ ಅನನ್ಯಭಕ್ತಿಯಿಂದಲೇ ಲಭ್ಯ. ಕೃಷ್ಣಭಕ್ತಿಗೆ ಐಶ್ವರ್ಯ ಬೇಕಾಗಿಲ್ಲ. ನೀರನ್ನು ಭಕ್ತಿಯಿಂದ ಅರ್ಪಿಸಿದರೂ ಸಾಕು. ಭಕ್ತಿಯಿಂದ ಅರ್ಪಿಸಿದ್ದನ್ನು ಅವನು ಸ್ವೀಕರಿಸುತ್ತಾನೆ. ಕೃಷ್ಣನಿಗೆ ಶತ್ರುಮಿತ್ರರಿಲ್ಲ. ಎಲ್ಲರಿಗೂ ಸಮವಾಗಿರುತ್ತಾನೆ. ಆದರೆ ಭಕ್ತಿ ಪೂರ್ವಕವಾಗಿ ಭಜಿಸುವವನೂ-ಎಷ್ಟೇ ಉತ್ಕøಷ್ಟನಾಗಲಿ ಅಥವಾ ನಿಕೃಷ್ಟನಾಗಲಿ-ಕೃಷ್ಣನಲ್ಲಿರುತ್ತಾನೆ. ಕೃಷ್ಣನೂ ಅವನಲ್ಲಿರುತ್ತಾನೆ. ಅತ್ಯಂತ ದುರಾಚಾರಿಯಾಗಿದ್ದರೂ ಅನನ್ಯಭಕ್ತಿಯಿಂದ ಭಜಿಸಿದರೆ ಸಾಧುವಾಗುತ್ತಾನೆ. ಏಕೆಂದರೆ ಅವನು ಬೇಗನೆ ಧರ್ಮಾತ್ಮನಾಗುತ್ತಾನೆ ಮತ್ತು ಶಾಶ್ವತ ಶಾಂತಿ ಹೊಂದುತ್ತಾನೆ. ಅವನ ಭಕ್ತಿ ನಾಶವಾಗುವುದೇ ಇಲ್ಲ. ಎಂಥವನಾದರೂ ಅವನನ್ನು ಆಶ್ರಯಿಸಿ ಪರಮಗತಿ ಹೊಂದಬಹುದು. ಕೃಷ್ಣನ ವಿಶ್ವರೂಪ ನೋಡಲು ದೇವತೆಗಳೂ ಬಯಸುತ್ತಾರೆ. ಆದರೆ ಸಾಮಾನ್ಯ ಸಾಧನೆಗಳಿಂದ ಇದನ್ನು ನೋಡಲು ಸಾಧ್ಯವಿಲ್ಲ. ಅನನ್ಯ ಭಕ್ತಿಯಿಂದ ವಿಶ್ವರೂಪಿಯಾದ ಕೃಷ್ಣನನ್ನು ಯಥಾರ್ಥವಾಗಿ ತಿಳಿಯಲು, ಸಾಕ್ಷಾತ್ಕರಿಸಲು ಮತ್ತು ಪ್ರವೇಶಿಲು ಸಾಧ್ಯ. ಐಕಾಂತಿಕಭಕ್ತಿಯೋಗದಿಂದ ಕೃಷ್ಣನನ್ನು ಸೇವಿಸುವವ ಪ್ರಕೃತಿಯ ಗುಣಗಳನ್ನು ದಾಟಿ ಬ್ರಹ್ಮಭಾವ ಪಡೆಯಲು ಸಮರ್ಥನಾಗುತ್ತಾನೆ.

	ಭಕ್ತಿಯೋಗದ ತೀಕ್ಷಣವಾದ ಅವಸ್ಥೆಯೇ ಧ್ಯಾನಯೋಗ. ಭಗವಂತನ ಕಡೆಗೆ ಹೋಗುವ ಭಾವ ತೈಲಧಾರೆಯಂತೆ ಅವಿಚ್ಛಿನ್ನವಾಗಿ ಪ್ರವಹಿಸುತ್ತಿದ್ದರೆ ಅದು ದರ್ಶನಕ್ಕೆ ಸಮಾನವಾಗಿರುತ್ತದೆ. ಆರನೆಯ ಅಧ್ಯಾಯದಲ್ಲಿ ಧ್ಯಾನಯೋಗದ ಸ್ಥಿತಿ ವಿವರಿಸಿದೆ. ಆತ್ಮಯೋಗವನ್ನು ಮಾಡುತ್ತಿರುವ ಯೋಗಿಯ ಚಿತ್ರ ಚಲಿಸದ ದೀಪಶಿಖೆಯಂತೆ ಇರುತ್ತದೆ. ಆಗ ಇಂದ್ರಿಯಾತೀತ ಸುಖ ಅನುಭವಿಸುತ್ತಾನೆ. ಅದರಲ್ಲಿಯೇ ಇದ್ದುಕೊಂಡು ತತ್ತ್ವದಿಂದ ಚಲಿಸುವುದಿಲ್ಲ.

	ಯೋಗಿ, ಜ್ಞಾನಿ, ಭಕ್ತ: ಭಗವದ್ಗಿತೆಯಲ್ಲಿ ನಿರೂಪಿಸಲ್ಪಟ್ಟ ಯೋಗಿ ಜ್ಞಾನಿ ಭಕ್ತ ಇವರಿಗೆ ವಿಶೇಷ ಭೇದವಿಲ್ಲ. ಕರ್ಮರಹಸ್ಯ ಅರಿತವ ನಿತ್ಯಾನಿತ್ಯವಸ್ತುಗಳ ವಿವೇಚನೆ ಬಲ್ಲವನಾಗಿರುತ್ತಾನೆ; ನಿತ್ಯಾನಿತ್ಯವಸ್ತುವಿಚಾರದಲ್ಲಿ ಕುಶಲನಾದವ ಜ್ಞಾನ ತಪಸ್ಸಿನಿಂದ ಪವಿತ್ರನಾಗಿ ಭಗವದ್ಭಾವ ಹೊಂದಲು ಅರ್ಹನಾಗುತ್ತಾನೆ. ಇವರೆಲ್ಲರ ಲಕ್ಷಣಗಳು ಒಂದೇ ಸಮವಾಗಿರುತ್ತವೆ.

	ಉಪನಿಷತ್ತುಗಳಲ್ಲಿ ಪ್ರತಿಪಾದಿತನಾಗಿರುವ ಮುಮುಕ್ಷು ಅತ್ಯಂತ ಧೀರ, ಕಠಿಣ ವ್ರತವುಳ್ಳವ, ಮನಸ್ಸನ್ನು ಆತ್ಮನಲ್ಲಿಯೆ ನಿಲ್ಲಿಸಿ ಬ್ರಹ್ಮದೊಂದಿಗೆ ಐಕ್ಯವನ್ನು ಪಡೆಯುವ ಪ್ರಯತ್ನಶೀಲ. ಆದರೆ ಗೀತೆಯಲ್ಲಿ ಹೇಳಲ್ಪಟ್ಟ ಮುಮುಕ್ಷುವಿನ ಯೋಗವಿಧಾನ ಸುಲಭವೂ ಸಹಜವೂ ಆಗಿರುತ್ತದೆ. ಮೊದಲು ಮನಸ್ಸಿನಲ್ಲಿರುವ ಕಾಮ ಹೋಗಬೇಕು. ಇಂದ್ರಿಯಗಳು ತಮ್ಮ ತಮ್ಮ ವಿಷಯಗಳಲ್ಲಿ ಪ್ರವರ್ತಿಸಿದ್ದಾಗಲೂ ವಿಷಯವಾಸನೆಗಳನ್ನು ಗ್ರಹಿಸದಿದ್ದರೆ ಇಂದ್ರಿಯಗಳನ್ನು ಜಯಿಸಿದಂತೆಯೇ. ಆಗ ರಾಗದ್ವೇಷಾದಿಗಳು ಉಂಟಾಗುವುದಿಲ್ಲ. ಬಾಹ್ಯವಿಷಯಗಳಿಂದ ಬರುವ ಶೀತೋಷ್ಣಗಳು ಸುಖದುಃಖಗಳು ಲಾಭಾಲಾಭಗಳು-ಇವೇಮೊದಲಾದ ದ್ವಂದ್ವಗಳನ್ನು ಅನಿತ್ಯಗಳೆಂದು ಪರಿಗಣಿಸಿದರೆ ಸಮತ್ವಬುದ್ಧಿಉಂಟಾಗುವುದು. ಇದೇ ಯೋಗ, ಇದೇ ಸ್ಥಿರವಾದ ಪ್ರಜ್ಞೆ. ದುಃಖ ಬಂದರೆ ಉದ್ವೇಗವಿರುವುದಿಲ್ಲ. ಸುಖ ಬಂದರೆ ಸ್ಪøಹೆ ಉಂಟಾಗುವುದಿಲ್ಲ. ಇವನ ವ್ಯವಹಾರವೆ ಬದಲಾಗುತ್ತದೆ. ಸಂಸಾರಿಗಳ ರಾತ್ರಿಹಗಲುಗಳು ಇವನಿಗೆ ಹಗಲುರಾತ್ರಿಗಳಾಗುತ್ತವೆ. ಅವರಿಗೆ ಯಾವುದು ನಿಜವೋ ಸಾರವೋ ಇವನಿಗೆ ಅದು ಸುಳ್ಳೂ ನಿಃಸಾರವೂ ಆಗುತ್ತದೆ. ಅವರು ಅರಿಯದ ಸತ್ಯವೂ ಶಾಸ್ವತವೂ ಆದ ತತ್ತ್ವಗಳನ್ನು ಇವನು ಅರಿಯುತ್ತಾನೆ. ಇವನಿಗೆ ಮಣ್ಣು ಕಲ್ಲು ಚಿನ್ನಗಳು ಒಂದೇ ಬೆಲೆಯುಳ್ಳದ್ದಾಗಿರುತ್ತದೆ. ದ್ವೇಷ ಆಕಾಂಕ್ಷೆ ಇವು ಇಲ್ಲದಿರುವುದರಿಂದ ಇವನೇ ನಿತ್ಯಸಂನ್ಯಾಸಿ, ಆತ್ಮಾನುಸಂಧಾನದಿಂದ ಭೇದಬುದ್ಧಿ ಹೋಗುತ್ತದೆ. ನಾನು ನನ್ನದು ಎಂಬುದು ಇರುವುದಿಲ್ಲ. ಸಮದರ್ಶಿಯಾಗಿರುವ ಯೋಗಿ ಆತ್ಮನನ್ನು ಸರ್ವಪ್ರಾಣಿಗಳಲ್ಲಿಯೂ ಸರ್ವಪ್ರಾಣಿಗಳನ್ನು ಆತ್ಮನಲ್ಲಿಯೂ ನೋಡುತ್ತಾನೆ. ಹೀಗೆ ಎಲ್ಲವನ್ನು ಕೃಷ್ಣನಲ್ಲಿಯೂ ಕೃಷ್ಣನನ್ನು ಎಲ್ಲದರÀಲ್ಲಿಯೂ ನೋಡುವವನಿಗೆ ಕೃಷ್ಣ ಕಾಣದೇ ಹೋಗುವುದಿಲ್ಲ, ಕೃಷ್ಣನಿಗೆ ಅವನು ಕಾಣದೆ ಹೋಗುವುದಿಲ್ಲ. ಯಾವನು ಆತ್ಮನಲ್ಲಿಯೇ ಸುಖವುಳ್ಳವನೋ ಆರಾಮವುಳ್ಳವನೋ ಪ್ರಕಾಶವುಳ್ಳವನೋ ಅವನು ಬ್ರಹ್ಮ ಭೂತನಾಗಿ ಬ್ರಹ್ಮನಿರ್ವಾಣ ಹೊಂದುತ್ತಾನೆ. ವಾಸುದೇವನೇ ಸರ್ವವೂ ಎಂಬ ಜ್ಞಾನದಿಂದ ಎಲ್ಲವೂ ಬ್ರಹ್ಮಮಯವಾಗುತ್ತದೆ.

	ಮೋಕ್ಷ: ಗೀತೆ ಮೋಕ್ಷವನ್ನು ನಾನಾ ಬಗೆಯಿಂದ ವರ್ಣಿಸಿದೆ. ಬ್ರಹ್ಮರೂಪವಾದ ಕರ್ಮದಲ್ಲಿ ಮನಸ್ಸಿಟ್ಟಿರುವವನಿಂದ ಹೊಂದಬೇಕಾದದ್ದು ಬ್ರಹ್ಮವೇ. ಅಮೃತವೆಂಬ ಹೆಸರುಳ್ಳ ಯಜ್ಞದ ಶೇಷವನ್ನು ಸೇವಿಸುವವ ಸನಾತನವಾದ ಬ್ರಹ್ಮನನ್ನೇ ಹೊಂದುತ್ತಾನೆ. ಬ್ರಹ್ಮಸ್ವರೂಪ ಹೊಂದಿ ಬ್ರಹ್ಮನಿರ್ವಾಣ ಪಡೆಯುತ್ತಾನೆ ಎಂದರ್ಥ. ಬ್ರಹ್ಮ ಎಂದರೆ ದಿವ್ಯನಾದ ಪರಪುರುಷನೇ. ಮರಣಕಾಲದಲ್ಲಿ ಇವನನ್ನು ಸ್ಮರಿಸುವವ ಇವನನ್ನೇ ಹೊಂದುತ್ತಾನೆ. ಈ ಪರಮಪುರುಷನೇ ಕೃಷ್ಣ. ನಿರ್ವಾಣದ ಕೊನೆಯೆಂದರೆ ಕೃಷ್ಣನಲ್ಲಿರುವ ಶಾಂತಿ. ಇದೇ ಪರಮಸಿದ್ಧಿ; ಇದನ್ನು ಹೊಂದಿದವ ದುಃಖಾಲಯವಾದ ಪುನರ್ಜನ್ಮ ಪಡೆಯುವುದಿಲ್ಲ. ಇದೇ ಉತ್ಕøಷ್ಟ ಸುಖ.

	ಸಮನ್ವಯ: ಹಿಂದೆ ಹೇಳಿದಂತೆ ಗೀತೆ ಉದಾರವಾದ ಸಮನ್ವಯಶಾಸ್ತ್ರ. ಭಿನ್ನ ಭಿನ್ನ ಆಗಮಗಳೂ ಸಾಧನೆಗಳೂ ದೇವತಾಕಲ್ಟನೆಗಳೂ ಗೀತೆಯೆಂಬ ಎರಕದ ಅಚ್ಚಿನಲ್ಲಿ ಸಮರಸವಾದ ರೂಪವನ್ನು ಹೊಂದಿವೆ. ವಾಙ್ಮನಸ್ಸುಗಳಿಗೆ ಅಗೋಚರವಾದ ಬ್ರಹ್ಮ ಈಶ್ವರನೂ ಭಗವಂತನೂ ಆಗಿದೆ. ಆದ್ದರಿಂದ ಭಕ್ತ ಯಾವ ಯಾವ ದೇವತೆಯನ್ನು ಪೂಜಿಸಲು ಬಯಸುವನೋ ಅವನಿಗೆ ಆಯಾ ದೇವತೆಯಲ್ಲೇ ಕೃಷ್ಣನ ಮೂಲಕ ಶ್ರದ್ಧೆ ಉಂಟಾಗುತ್ತದೆ. ಶ್ರದ್ಧೆಯಿಂದ ಕೂಡಿದ ಭಕ್ತ ಆ ದೇವತೆಯನ್ನೇ ಆರಾಧಿಸುತ್ತ ಅದರಿಂದ-ಕೃಷ್ಣನಿಂದಲೇ ವಿಹಿತವಾದ ಬಯಕೆಗಳನ್ನು ಪಡೆಯುತ್ತಾನೆ.

	ಭಗವಂತನ ಮೂರ್ತರೂಪಗಳೆಲ್ಲ ಅಮೂರ್ತದ ವ್ಯಕ್ತಿಗಳು. ಅವ್ಯಯವೂ ನಿರತಿಶಯವೂ ಆದ ಕೃಷ್ಣನ ಪರಭಾವವನ್ನು ಅರಿಯದ ಅವಿವೇಕಿಗಳು ಅವನು ಮೊದಲು ಅವ್ಯಕ್ತನಾಗಿದ್ದು ಅನಂತರ ವ್ಯಕ್ತಗೊಂಡನೆಂದು ಎಣಿಸುತ್ತಾರೆ. ಗೋಪವೇಷದಿಂದ ಆವತರಿಸುವ ವಿಷ್ಣು ತನ್ನನ್ನು ಎಲ್ಲರೂ ಆಶ್ರಯಿಸಬೇಕೆಂದೂ ಆರಾಧಿಸಬೇಕೆಂದೂ ಗೀತೆಯ ಪ್ರತಿಯೊಂದು ಅಂಶದಲ್ಲಿಯೂ ಹೇಳುತ್ತಾನೆ. ಅವ್ಯಕ್ತವಾದ ಪಾರಮಾರ್ಥಿಕ ತತ್ತ್ವ ಎಲ್ಲರಿಗೂ ಒಂದೇ ವಿಧವಾಗಿ ಗೋಚರಿಸುವುದಿಲ್ಲ. ಅವರವರ ಶಕ್ತಿಗೆ ಅನುಸಾರವಾಗಿ ಉಪಲಬ್ಧವಾಗುತ್ತದೆ. ಹೀಗೆ ಗೀತಾಚಾರ್ಯ ಬಗೆಬಗೆಯಾದ ಉಪಾಸನೆಗಳನ್ನೂ ಕಲ್ಪನೆಗಳನ್ನೂ ಒಪ್ಪಿಕೊಂಡು ಸಾಧಕನನ್ನು ಪರ್ವದಿಂದ ಪರ್ವಕ್ಕೆ ಒಯ್ಯುತ್ತಾನೆ. ಕೊನೆಗೆ ಉಳಿಯುವುದು ಕೃಷ್ಣನೆಂಬ ಪರತತ್ತ್ವವೇ.

	ಉತ್ತಮಪುರುಷ ಏಕವಚನದಲ್ಲಿ ಮಾತನಾಡುತ್ತಿರುವ ಕೃಷ್ಣ ಅತ್ಯಂತ ದೂರದಲ್ಲಿರುವ ರಹಸ್ಯತತ್ತ್ವವಲ್ಲ, ಮನುಷ್ಯನ ಹೃದಯವನ್ನು ಪ್ರವೇಶಿಸಿ ಅವನ ಜೀವನದ ಪ್ರತಿಯೊಂದು ರಂಗದಲ್ಲಿಯೂ ವ್ಯವಹರಿಸುತ್ತಿರುವ ಅಂತರತಮತತ್ತ್ವ. ಕೃಷ್ಣ ಅರ್ಜುನನ ಸಖನಾಗಿರುವಂತೆ ಪ್ರತಿಯೊಬ್ಬ ಮನುಷ್ಯನ ಸ್ನೇಹಿತ ಪ್ರಿಯ ಬಾಂಧವ; ಮನುಷ್ಯ ಸ್ವಾರ್ಥ ಬಿಟ್ಟು, ವಿಶ್ವಸೇವೆಯ ಮಹತಾರ್ಯದಲ್ಲಿ ನಿಯೋಜಿತನಾಗುವಾಗ ಅವನನ್ನು ಮೇಲಮೇಲಕ್ಕೆ ಹತ್ತಿಸಲು ಕೃಷ್ಣ ಆಧಾರ ಶಕ್ತಿಯಾಗಿ ನಿಂತಿದ್ದಾನೆ. ಮನುಷ್ಯ ತನ್ನ ನಿಜವಾದ ಸ್ವಾತಂತ್ರ್ಯ ಅರಿಯದೆ ಮಿಥ್ಯಾಸ್ವಾತಂತ್ರ್ಯದಲ್ಲಿ ಮೋಹಿತನಾಗಿರುವಾಗಲೂ ಕೃಷ್ಣ ಬಲಾತ್ಕರಿಸುವುದಿಲ್ಲ-ಯಥೇಚ್ಛಿಸಿ ತಥಾ ಕುರು-ಎಂದು ಹೇಳುತ್ತಾನೆ. ಹೀಗೆಯೇ ಅರ್ಜುನ ಕೂಡ ಆದರ್ಶವ್ಯಕ್ತಿಯಾಗಿದ್ದಾನೆ: ಸತ್ಪುರುಷರ ಹಾಗೆ ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನೇ ಮಾಡಬೇಕೆಂಬುದು ಅವನ ಬಯಕೆ. ತನ್ನ ಕರ್ತವ್ಯ ನೆರವೇರಿಸಲು ಅವನನ್ನು ಬುದ್ಧಿ ಪ್ರೇರಿಸುತ್ತದೆ, ಆದರೆ ಮೋಹದಿಂದ ಕಲುಷಿತವಾದ ಅನುಕಂಪೆ ಅವನನ್ನು ಇನ್ನೊಂದು ಕಡೆಗೆ ಎಳೆಯುತ್ತದೆ. ಇತಿಕರ್ತವ್ಯತಾ ಮೂಢನಾಗುವುದು ಮನುಷನಿಗೆ ಸಹಜವೇ. ಆದರೆ ಕೃಷ್ಣನಂಥ ಸದ್ಗುರು ಲಭಿಸಿದ್ದು ಅವನ ಪುಣ್ಯವೇ. ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ಎಂದು ಕೃಷ್ಣನ ಅಡಿಗಳಲ್ಲಿ ಎರಗುತ್ತಾನೆ.

	ಅರ್ಜುನನ ಸಮಸ್ಯೆಯೂ ಕೃಷ್ಣನಿಗೆ ತಿಳಿಯದಿರಲಿಲ್ಲ. ಸಾಮಾನ್ಯ ಮನುಜರಂತೆ ಅವನ ಇಂದ್ರಿಯಗಳೂ ಹತೋಟಿಯಿಲ್ಲದೆ ವಿಷಯಗಳ ಹಿಂದೆ ಓಡುತ್ತವೆ. ನರಕದ್ವಾರಗಳೆನಿಸಿದ ಕಾಮ ಕ್ರೋಧಲೋಭಗಳಿಂದಲೂ ದ್ವಂದ್ವಗಳಿಂದಲೂ ಅವನು ಪೀಡಿತನವಾಗಿ ಅಧರ್ಮವನ್ನೇ ಧರ್ಮವೆಂದು ಭಾವಿಸುತ್ತಾನೆ. ಆದರೂ ಅರ್ಜುನನ ಒಳಗೆ ಅಡಗಿರುವ ಒಳ್ಳೆಯ ಸಂಸ್ಕಾರಗಳನ್ನು ಕೃಷ್ಣ ನೋಡುತ್ತಾನೆ. ಅವನ ಸಮಸ್ಯೆಗಳನ್ನು ಬರಿಯ ನೀತಿಗಳಿಂದಾಗಲೀ ಲೌಕಿಕವಾದಗಳಿಂದಾಗಲೀ ಬಗೆಹರಿಸುವುದು ಅಸಾಧ್ಯವೆಂಬುದು ಕೃಷ್ಣನಿಗೆ ತಿಳಿದಿದೆ. ಆದ್ದರಿಂದಲೇ ಕೃಷ್ಣ ಮೊದಲು ಪ್ರಕೃತಿಯಿಂದಲೂ ಅದರ ವಿಕಾರದಿಂದಲೂ ಗುಣಗಳಿಂದಲೂ ಭಿನ್ನವಾದ ಅವಿನಾಶಿಯಾದ ಆತ್ಮನನ್ನು ಉಪದೇಶಿಸಲು ಪ್ರಾರಂಭಿಸುತ್ತಾನೆ. ದೇಹಾತ್ಮ ಬುದ್ಧಿಯೇ ಮನುಷ್ಯನ ಉಗ್ರ ಕರ್ಮ ಮತ್ತು ಘೋರ ಬಯಕೆಗಳಿಗೆ ಮೂಲ, ಆದ್ದರಿಂದ ಅದು ಮೊದಲು ತೊಲಗಿ ಆತ್ಮಜ್ಞಾನ ಉಂಟಾಗಬೇಕು. ಕೃಷ್ಣ ಅರ್ಜುನನಿಗೆ ಮಾಡಿದ ಉಪದೇಶ ಪ್ರತಿಯೊಬ್ಬ ಮಾನವನನ್ನೂ ಉದ್ದೇಶಿಸಿ ಮಾಡಿದ ಉಪದೇಶ. (ಎಸ್‍ಡಬ್ಲ್ಯೂ.ಎ)

	ಭಗವದ್ಗೀತೆಯ ಮೇಲೆ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರು ಭಾಷ್ಯಗಳನ್ನು ಬರೆದಿರುತ್ತಾರೆ. ಆಧುನಿಕರಲ್ಲಿ ಬಾಲಗಂಗಾಧರ ತಿಲಕ್, ಅರವಿಂದ ಘೋಷ್ ಮತ್ತು ಮಹಾತ್ಮ ಗಾಂಧಿಯವರು ಬರೆದಿರುವ ಟೀಕೆಗಳು ಪ್ರಸಿದ್ಧವಾದವು. ಇವುಗಳ ಕನ್ನಡ ಭಾಷಾಂತರಗಳು ಅನೇಕವು ಬಂದಿವೆ. ಇದರ ಮೂಲ ಶ್ಲೋಕಗಳು ಮತ್ತು ಕನ್ನಡ ತಾತ್ಪರ್ಯದೊಂದಿಗೆ ಶ್ರೀ ಸ್ವಾಮಿ ಆದಿದೇವಾನಂದರು ರಚಿಸಿರುವ ಶ್ರೀ ರಾಮಕೃಷ್ಣಾಶ್ರಮದ ಪ್ರಕಟಣೆ ಅತ್ಯಂತ ಸುಲಭ ಬೆಲೆಯ ಕನ್ನಡ ಪುಸ್ತಕ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ